ಟೆನಿಸ್ ತಾರೆ ಡಿಮಿಟ್ರೋಡ್‌ಗೆ ಕೊರೋನ ಸೋಂಕು
ಬಲ್ಗೇರಿಯಾ, ಜೂ.22: ವಿಶ್ವದ 19ನೇ ಕ್ರಮಾಂಕದ ಬಲ್ಗೇರಿಯನ್ ಟೆನಿಸ್ ಪಟು ಗ್ರಿಗೋರ್ ಡಿಮಿಟ್ರೋವ್ ಅವರಿಗೆ ಕೊರೋನ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.
ಡಿಮಿಟ್ರೋವ್ ತಮ್ಮ ಇನ್‌ಸ್ಟಾಗ್ರಾಂ ಹ್ಯಾಂಡಲ್‌ನಲ್ಲಿ ಈ ಮಾಹಿತಿ ಬಹಿರಂಗಪಡಿಸಿದ್ದಾರೆ. ಇತ್ತೀಚೆಗೆ ಇವರು ನೊವಾಕ್ ಜೊಕೊವಿಕ್, ಅಲೆಕ್ಸಾಂಡರ್ ವೆರೇವ್ ಹಾಗೂ ಡಾಮಿನಿಕ್ ಥೀಮ್ ಜತೆ ಅಡ್ರಿಯಾ ಟೂರ್‌ನಲ್ಲಿ ಭಾಗವಹಿಸಿದ್ದರು.
ಎಲ್ಲರಿಗೂ ಹಾಯ್.. ನನಗೆ ಕೋವಿಡ್-19 ಸೋಂಕು ತಗುಲಿ ಮೊನಾಕೊಗೆ ವಾಪಸ್ಸಾಗಿರುವುದನ್ನು ನನ್ನನ್ನು ಭೇಟಿ ಮಾಡಲು ಬಯಸುವವರು ಹಾಗೂ ಅಭಿಮಾನಿಗಳಿಗೆ ತಿಳಿಯಬಯಸುತ್ತೇನೆ. ಕಳೆದ ಕೆಲ ದಿನಗಳಿಂದ ನನ್ನ ಸಂಪರ್ಕದಲ್ಲಿದ್ದ ಎಲ್ಲರೂ ತಪಾಸಣೆ ಮಾಡಿಸಿಕೊಳ್ಳುವಂತೆ ಮತ್ತು ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಸಲಹೆ ಮಾಡುತ್ತೇನೆ. ನನ್ನಿಂದ ಯಾರಿಗಾದರೂ ಅಡಚಣೆಯಾಗಿದ್ದರೆ ಕ್ಷಮೆ ಯಾಚಿಸುತ್ತೇನೆ. ನಾನೀನ ಮನೆಗೆ ವಾಪಸ್ಸಾಗಿದ್ದೇನೆ ಹಾಗೂ ಚೇತರಿಸಿಕೊಳ್ಳುತ್ತಿದ್ದೇನೆ. ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು. ಎಲ್ಲರೂ ಸುರಕ್ಷಿತವಾಗಿರಿ ಹಾಗೂ ಆರೋಗ್ಯದಿಂದಿರಿ ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.
ಅಗ್ರಗಣ್ಯ ಟೆನಿಸ್ ಆಟಗಾರರೊಬ್ಬರಿಗೆ ಕೋವಿಡ್-19 ಸೋಂಕು ತಗುಲಿರುವುದು ಇದೇ ಮೊದಲು. ಜೂನ್ 21ರಂದು ಅವರು ವಿಶ್ವದ ನಂಬರ್ 1 ಆಟಗಾರ ನೊವಾಕ್ ಜೋಕೋವಿಕ್ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದರು. ಆದರೆ ಕೊನೆಕ್ಷಣದಲ್ಲಿ ಹಿಂದೆ ಸರಿದಿದ್ದರು.