ಇಸ್ಲಾಮಾಬಾದ್‌ನಲ್ಲಿ ಹಿಂದೂ ದೇಗುಲಕ್ಕೆ ಶಿಲಾನ್ಯಾಸ: ಪಾಕ್ ಸರಕಾರದಿಂದ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ

Update: 2020-06-24 18:16 GMT

ಇಸ್ಲಾಮಾಬಾದ್,ಜೂ.25: ಪಾಕಿಸ್ತಾನ ಸರಕಾರವು 10 ಕೋಟಿ ರೂ. ವೆಚ್ಚದಲ್ಲಿ ಹಿಂದೂ ದೇವಾಲಯದ ನಿರ್ಮಾಣ ಕಾರ್ಯವನ್ನು ಆರಂಭಿಸಿದೆ. ಇಸ್ಲಾಮಾಬಾದ್‌ನಲ್ಲಿ ನಿರ್ಮಾಣವಾಗುತ್ತಿರುವ ಪ್ರಪ್ರಥಮ ಹಿಂದೂ ದೇವಾಲಯ ಇದಾಗಿದೆ. ಮಂಗಳವಾರ ನಡೆದ ದೇವಸ್ಥಾನ ಶಿಲಾನ್ಯಾಸ ರ್ಕಾಕ್ರಮವನ್ನು ಮಾನವಹಕ್ಕುಗಳ ಕುರಿತ ಸಂಸದೀಯ ಕಾರ್ಯದರ್ಶಿ ಲಾಲ್ ಚಾಂದ್ ಮಾಲ್ ಹಿ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಾಲ್ ಹಿ ಅವರು ಇಸ್ಲಾಮಾಬಾದ್ ಹಾಗೂ ಸೈದಾಪುರ ಗ್ರಾಮ ಹಾಗೂ ರಾವಲ್ ಸರೋವರ ಸಮೀಪದ ಕೊರಾಂಗ್ ನದಿ ಸಮೀಪದ ಬೆಟ್ಟದ ಸ್ಥಳ ಸೇರಿದಂತೆ ಆಸುಪಾಸಿನ ಪ್ರದೇಶಗಳಲ್ಲಿ 1947ಕ್ಕೆ ಮುನ್ನ ಹಲವಾರು ಹಿಂದೂ ದೇವಾಲಯಗಳಿದ್ದವು. ಆದರೆ ಅವು ಈಗ ಪಾಳುಬಿದ್ದ ಸ್ಥಿತಿಯಲ್ಲಿವೆಂದು ಹೇಳಿದರು.

ಕಳೆದ ಎರಡು ದಶಕಗಳಲ್ಲಿ ಇಸ್ಲಾಮಾಬಾದ್‌ನಲ್ಲಿ ಹಿಂದೂಗಳ ಜನಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿರುವುದರಿಂದ ಅವರಿಗೆ ದೇವಾಲಯದ ಅಗತ್ಯವಿದೆಯೆಂದು ಮಾಲ್ ಹಿ ಹೇಳಿರುವುದಾಗಿ ‘ಡಾನ್’ ಪತ್ರಿಕೆ ವರದಿ ಮಾಡಿದೆ.ದೇವಾಲಯದ ನಿರ್ಮಾಣದ ವೆಚ್ಚವನ್ನು ಪಾಕ್ ಸರಕಾರವೇ ಭರಿಸಲಿದೆ ಎಂದು ಧಾರ್ಮಿಕ ವ್ಯವಹಾರಗಳ ಸಚಿವ ಪೀರ್ ನೂರುಲ್ ಹಖ್ ತಿಳಿಸಿದ್ದಾರೆ.

ಈ ದೇಗುಲ ಸಂಕೀರ್ಣವು ರುದ್ರಭೂಮಿಯನ್ನು ಕೂಡಾ ಹೊಂದಿದೆ. ಅಲ್ಲದೆ ಇತರ ಧಾರ್ಮಿಕ ವಿಧಿವಿಧಾನಗಳನ್ನು ನಿರ್ವಹಿಸಲು ಪ್ರತ್ಯೇಕ ಕಟ್ಟಡಗಳು ಕೂಡಾ ನಿರ್ಮಾಣಗೊಳ್ಳಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News