×
Ad

ಸಂತ್ರಸ್ತರಿಗೆ 2.1 ಶತಕೋಟಿ ಡಾಲರ್ ಪಾವತಿಸಲು ಜಾನ್ಸನ್ ಆ್ಯಂಡ್ ಜಾನ್ಸನ್ ಗೆ ಅಮೆರಿಕ ಕೋರ್ಟ್ ಆದೇಶ

Update: 2020-06-24 23:14 IST

ವಾಶಿಂಗ್ಟನ್,ಜೂ.24: ಬಹುರಾಷ್ಟ್ರೀಯ ಕಂಪೆನಿ ಜಾನ್ಸನ್ ಆ್ಯಂಡ್ ಜಾನ್ಸನ್ ಮಾರಾಟ ಮಾಡಿರುವ ಟಾಲ್ಕಂ ಪೌಡರ್, ಗರ್ಭಕೋಶದ ಕ್ಯಾನ್ಸರ್‌ಗೆ ಕಾರಣವಾದ ಪ್ರಕರಣದ ಬಗ್ಗೆ ತೀರ್ಪು ನೀಡಿರುವ ಅಮೆರಿಕದ ನ್ಯಾಯಾಲಯವು, ಸಂತ್ರಸ್ತರಿಗೆ ಒಟ್ಟು 2.1 ಶತಕೋಟಿ ಡಾಲರ್ ಪರಿಹಾರವನ್ನು ನೀಡುವಂತೆ ಆದೇಶಿಸಿದೆ.

  2018ರಲ್ಲಿ ಅಮೆರಿಕದ ನ್ಯಾಯಾಲಯವೊಂದು 22 ಜನ ಸಂತ್ರಸ್ತರಿಗೆ ಜಾನ್ಸನ್ ಆ್ಯಂಡ್ ಜಾನ್ಸನ್ 4.4 ಶತಕೋಟಿ ಡಾಲರ್ ಪರಿಹಾರ ನೀಡುವಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಕಂಪೆನಿಯು ಮಿಸ್ಸೋರಿ ರಾಜ್ಯದ ಮೇಲ್ಮನವಿಗಳ ವಿಚಾರಣಾ ನ್ಯಾಯಾಲಯದ ಮೆಟ್ಟಲೇರಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಈ ಪರಿಹಾರದ ಮೊತ್ತವನ್ನು ಅದರ ಅರ್ಧದಷ್ಟು ಅಂದರೆ 2.1 ಶತಕೋಟಿ ಡಾಲರ್‌ಗೆ ಇಳಿಸಿದೆ.

 ಕೆಲವು ದೂರುದಾರರು ಮಿಸ್ಸೋರಿ ರಾಜ್ಯದವರಲ್ಲದಿರುವುದರಿಂದ ಅವರನ್ನು ಪ್ರಕರಣದಲ್ಲಿ ಸೇರ್ಪಡೆಗೊಳಿಸಬಾರದಿತ್ತೆಂಬ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪೆನಿಯ ವಾದವನ್ನು ನ್ಯಾಯಾಲಯ ಒಪ್ಪಿಕೊಂಡಿತ್ತು.

ಆದಾಗ್ಯೂ ನ್ಯಾಯಾಲಯ ಮಂಗಳವಾರ ನೀಡಿದ ತೀರ್ಪಿನಲ್ಲಿ, ಸಂಸ್ಥೆಯು ಗೊತ್ತಿದ್ದೂ ಕಾನ್ಸರ್‌ಕಾರಕವಾದ ಅಸ್ಬೆಸ್ಟೊಸ್ ಅಂಶಗಳನ್ನು ಒಳಗೊಂಡ ಉತ್ಪನ್ನಗಳನ್ನು ಗ್ರಾಹಕರಿಗೆ ಮಾರಾಟ ಮಾಡಿರುವುದಕ್ಕಾಗಿ ಸಂತ್ರಸ್ತರಿಗೆ ಪರಿಹಾರ ಪಾವತಿಸುವಂತೆ ಸೂಚಿಸಿತ್ತು.

ಪ್ರತಿವಾದಿ ಸಂಸ್ಥೆಯಿಂದ ದೂರುದಾರರಿಗೆ ಆಗಿರುವ ದೈಹಿಕ, ಮಾನಸಿಕ ಹಾಗೂ ಭಾವಾನಾತ್ಮಕ ನೋವಿಗೆ ಬೆಲೆಕಟ್ಟುವುದು ಅಸಾಧ್ಯವೆಂದು ಅದು ಹೇಳಿದೆ.

  ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಮಿಸ್ಸೋರಿಯ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಜಾನ್ಸನ್ ಹಾಗೂ ಜಾನ್ಸನ್ ಸಂಸ್ಥೆ ತಿಳಿಸಿದೆ.

 ತನ್ನ ಟಾಲ್ಕಂಪೌಡರ್ ಉತ್ಪನ್ನಗಳಲ್ಲಿ ಕ್ಯಾನ್ಸರ್ ಉಂಟು ಮಾಡಬಲ್ಲಂತಹ ಅಸ್ಬೆಸ್ಟೊಸ್ ಕ್ಯಾನ್ಸರ್‌ನ ಅಪಾಯದ ಬಗ್ಗೆ ಗ್ರಾಹಕರಿಗೆ ಎಚ್ಚರಿಕೆ ನೀಡಲು ಕಂಪೆನಿ ವಿಫಲವಾಗಿದೆ ಎಂದು ಆರೋಪಿಸಿ ಅಮೆರಿಕದಲ್ಲಿ ಜಾನ್ಸನ್ ಆ್ಯಂಡ್ ಜಾನ್ಸನ್ ವಿರುದ್ಧ ಸಾವಿರಾರು ಪ್ರಕರಣಗಳು ದಾಖಲಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News