×
Ad

ಲಿವರ್‌ಪೂಲ್‌ಗೆ ಪ್ರತಿಷ್ಠಿತ ಪ್ರೀಮಿಯರ್ ಲೀಗ್ ಪ್ರಶಸ್ತಿ

Update: 2020-06-26 09:11 IST

ಮ್ಯಾಂಚೆಸ್ಟರ್, ಜೂ.26: ಲಿವರ್‌ಪೂಲ್ ತಂಡ ಪ್ರತಿಷ್ಠಿತ ಪ್ರಿಮಿಯರ್ ಲೀಗ್ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆದ್ದಿದೆ. ಗುರುವಾರ ಚೆಲ್ಸಿಯಾ ತಂಡ ಮ್ಯಾಂಚೆಸ್ಟರ್ ಸಿಟಿ ತಂಡದ ಸವಾಲನ್ನು 2-1 ಗೋಲುಗಳಿಂದ ಬಗ್ಗುಬಡಿಯುವ ಮೂಲಕ, ಪ್ರಶಸ್ತಿ ಲಿವರ್‌ಪೂಲ್‌ಗೆ ಅನಾಯಾಸವಾಗಿ ಒಲಿಯಿತು. ಇದರೊಂದಿಗೆ ಲಿವರ್‌ಪೂಲ್ ತಂಡ 30 ವರ್ಷಗಳ ಚಾಂಪಿಯನ್‌ಶಿಪ್‌ನಲ್ಲಿ 30 ವರ್ಷಗಳ ಪ್ರಶಸ್ತಿಯ ಬರ ನೀಗಿಸಿಕೊಂಡಿತು.

ಟೂರ್ನಿಯಲ್ಲಿ ಇನ್ನೂ ದಾಖಲೆ ಏಳು ಪಂದ್ಯಗಳು ಬಾಕಿ ಉಳಿದಿರುವಂತೆಯೇ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿರುವ ಜುರ್ಗಾನ್ ಕ್ಲೋಪ್ ನೇತೃತ್ವದ ಲಿವರ್‌ಪೂಲ್ ತಂಡ ಪ್ರಶಸ್ತಿಗೆ ಪಾತ್ರವಾಯಿತು. ಇದು ಲಿವರ್‌ಪೂಲ್ ಕ್ಲಬ್‌ಗೆ 19ನೇ ಲೀಗ್ ಪ್ರಶಸ್ತಿಯಾಗಿದೆ. ಎರಡನೇ ಸ್ಥಾನದಲ್ಲಿದ್ದ ಮ್ಯಾಂಚೆಸ್ಟರ್ ಸಿಟಿ ತಂಡ ಗುರುವಾರದ ಸೋಲಿನೊಂದಿಗೆ 23 ಅಂಕಕ್ಕೇ ತೃಪ್ತಿಪಡುವಂತಾಯಿತು. ಬುಧವಾರ ಎನ್‌ಫೀಲ್ಡ್‌ನಲ್ಲಿ ನಡೆದ ಪಂದ್ಯದಲ್ಲಿ ಕ್ರಿಸ್ಟಲ್ ಪ್ಯಾಲೇಸ್ ತಂಡವನ್ನು 4-0 ಅಂತರದಿಂದ ಬಗ್ಗುಬಡಿಯುವ ಮೂಲಕ ಲಿವರ್‌ಪೂಲ್ ಪ್ರಶಸ್ತಿಯಿಂದ ಕೇವಲ ಎರಡು ಅಂಕದಷ್ಟು ದೂರದಲ್ಲಿತ್ತು.

ಈ ಋತುವಿನಲ್ಲಿ ಆಡಿದ 31 ಪಂದ್ಯಗಳ ಪೈಕಿ ಲಿವರ್‌ಪೂಲ್ 28 ಪಂದ್ಯಗಳನ್ನು ಗೆದ್ದಿದ್ದು, ತಂಡದ ಸ್ಟಾರ್ ಆಟಗಾರ ಮುಹಮ್ಮದ್ ಸಲಾಹ್ ನಮಗೆ ಇದು ಪ್ರಶಸ್ತಿ ಗೆಲ್ಲುವ ಸಮಯ ಎಂದು ಕನಸು ಕಂಡ 24 ಗಂಟೆಗಳಲ್ಲೇ ಪ್ರಶಸ್ತಿಯ ಕನಸು ನನಸಾಗಿದೆ. ಸ್ಟ್ಯಾಮ್‌ಫೋರ್ಡ್ ಬ್ರಿಡ್ಜ್‌ನಲ್ಲಿ ಚೆಲ್ಸಿಯಾ ತಂಡ, ಲಿವರ್‌ಪೂಲ್‌ಗೆ ಅನುಕೂಲಕರ ಫಲಿತಾಂಶ ತಂದುಕೊಟ್ಟಿತು.

ಈ ಮೊದಲು ಲಿವರ್‌ಪೂಲ್ ತಂಡ ಟೂರ್ನಿಯಲ್ಲಿ 5 ಪಂದ್ಯಗಳು ಬಾಕಿ ಉಳಿದಿರುವಂತೆಯೇ ಪ್ರಶಸ್ತಿ ಗೆದ್ದದ್ದು ದಾಖಲೆಯಾಗಿತ್ತು. ಇದೀಗ 7 ಪಂದ್ಯಗಳು ಬಾಕಿ ಇರುವಂತೆಯೇ ಪ್ರಶಸ್ತಿಗೆ ತಂಡ ಮುತ್ತಿಕ್ಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News