ಇಂಗ್ಲೆಂಡ್ ವಿರುದ್ಧ ಸರಣಿ: ಇಂದು ಲಂಡನ್ ಗೆ ತೆರಳಲಿದೆ ಪಾಕಿಸ್ತಾನ

Update: 2020-06-28 05:14 GMT

ಕರಾಚಿ, ಜೂ.27: ಕೊರೋನ ವೈರಸ್ ಸೋಂಕಿಗೆ ಒಳಗಾಗಿರುವ 10 ಆಟಗಾರರು ಹೊರತುಪಡಿಸಿ ಉಳಿದ ಆಟಗಾರರೊಂದಿಗೆ ಪಾಕಿಸ್ತಾನ ಕ್ರಿಕೆಟ್ ತಂಡ ರವಿವಾರ ಲಂಡನ್‌ಗೆ ಪ್ರಯಾಣಿಸಲಿದೆ. ಈ ಮೂಲಕ ಇಂಗ್ಲೆಂಡ್ ಕ್ರಿಕೆಟ್ ಪ್ರವಾಸವನ್ನು ಆರಂಭಿಸಲಿದೆ. ಆದರೆ, ಈ ತನಕ ಕ್ರಿಕೆಟ್ ಸರಣಿಯ ವೇಳಾಪಟ್ಟಿ ಅಂತಿಮವಾಗಿಲ್ಲ.

ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ)ಶುಕ್ರವಾರ ಕ್ರಿಕೆಟ್ ಪ್ರವಾಸವನ್ನು ದೃಢಪಡಿಸಿದ್ದು, ಮೂರು ಪಂದ್ಯಗಳ ಟೆಸ್ಟ್ ಹಾಗೂ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯು ಪ್ರೇಕ್ಷಕರಿಲ್ಲದೆ ನಡೆಯಲಿದೆ ಎಂದು ತಿಳಿಸಿದೆ.

ಪಾಕ್‌ನ ಇಂಗ್ಲೆಂಡ್ ಕ್ರಿಕೆಟ್ ಪ್ರವಾಸವು ಜುಲೈ 30ರಿಂದ ಆರಂಭವಾಗಬೇಕಾಗಿತ್ತು. ಆದರೆ, ಸಾಂಕ್ರಾಮಿಕ ಕಾಯಿಲೆಯಿಂದಾಗಿ ಮುಂದಿನ ತಿಂಗಳು ಆರಂಭವಾಗಲಿರುವ ವೆಸ್ಟ್‌ಇಂಡೀಸ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯು ಜುಲೈ 28ಕ್ಕೆ ಅಂತ್ಯವಾಗಲಾರದು. ಅತಿ ಶೀಘ್ರದಲ್ಲೇ ಪಾಕಿಸ್ತಾನ ವಿರುದ್ಧ ಸರಣಿಯ ವೇಳಾಪಟ್ಟಿ ಪ್ರಕಟವಾಗಲಿದೆ ಎಂದು ಇಸಿಬಿ ತಿಳಿಸಿದೆ.

ಈ ವಾರ ಪಾಕ್‌ನ 10 ಕ್ರಿಕೆಟ್ ಆಟಗಾರರು ಹಾಗೂ ಓರ್ವ ಸಿಬ್ಬಂದಿಗೆ ಕೊರೋನ ವೈರಸ್ ಇರುವುದು ದೃಢಪಟ್ಟಿದ್ದು,ಎಲ್ಲರೂ ಪಾಕ್‌ನಲ್ಲಿರುವ ತಮ್ಮ ಮನೆಯಲ್ಲಿ ಸ್ವಯಂ ಪ್ರತ್ಯೇಕವಾಸವಾಗಿದ್ದಾರೆ. ಸೋಂಕಿನಿಂದ ಗುಣಮುಖರಾದ ಬೆನ್ನಿಗೆ ಇಂಗ್ಲೆಂಡ್‌ಗೆ ಪ್ರಯಾಣಿಸಲಿದ್ದಾರೆ.

 ರವಿವಾರ ಇಂಗ್ಲೆಂಡ್‌ಗೆ ತೆರಳುವ ಮೊದಲು ಪಾಕ್ ಕ್ರಿಕೆಟ್ ತಂಡದ ಉಳಿದಿರುವ ಆಟಗಾರರು ಕೋವಿಡ್-19 ಪರೀಕ್ಷೆಗೆ ಒಳಗಾಗಲಿದ್ದಾರೆ. ಇಂಗ್ಲೆಂಡ್ ತಲುಪಿದ ತಕ್ಷಣ ವರ್ಸೆಸ್ಟರ್‌ನಲ್ಲಿ 14 ದಿನಗಳ ಕಾಲ ಪ್ರತ್ಯೇಕವಾಸದಲ್ಲಿರಲಿದ್ದಾರೆ. ಜುಲೈ 13ರಂದು ಡರ್ಬಿಶೈರ್‌ನ ಇಂಕೊರ ಕೌಂಟಿ ಗ್ರೌಂಡ್‌ಗೆ ತೆರಳಲಿದ್ದಾರೆ.

ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆ ಮಾಡಲಾಗಿದ್ದ 29 ಕ್ರಿಕೆಟಿಗರ ಪೈಕಿ 10 ಮಂದಿಯ ಕೊರೋನ ವೈರಸ್ ಪರೀಕ್ಷೆಯ ಫಲಿತಾಂಶದಲ್ಲಿ ಪಾಸಿಟಿವ್ ವರದಿ ಬಂದ ಬಳಿಕ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಆತಂಕ ವ್ಯಕ್ತಪಡಿಸಿತ್ತು. ಯಾರಲ್ಲೂ ರೋಗ ಲಕ್ಷಣ ಕಾಣಿಸಿಕೊಂಡಿರಲಿಲ್ಲ. ಎಲ್ಲರೂ ಸರಿಯಾದ ಸಮಯಕ್ಕೆ ಚೇತರಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News