ಶೀಘ್ರವೇ ಅತನು ದಾಸ್- ದೀಪಿಕಾ ಕುಮಾರಿ ವಿವಾಹ

Update: 2020-06-28 05:16 GMT

ಕೋಲ್ಕತಾ, ಜೂ.27: ಭಾರತದ ಆರ್ಚರಿ ಜೋಡಿ ಅತನು ದಾಸ್ ಹಾಗೂ ದೀಪಿಕಾ ಕುಮಾರಿ ಮಂಗಳವಾರದಂದು ಜೀವನದ ಹೊಸ ಇನಿಂಗ್ಸ್ ಆರಂಭಿಸಲು ನಿರ್ಧರಿಸಿದ್ದಾರೆ. ಈ ಹಿಂದೆ 2020ರ ಒಲಿಂಪಿಕ್ಸ್ ಬಳಿಕ ವಿವಾಹವಾಗಲು ನಿರ್ಧರಿಸಿದ್ದ ಈ ಜೋಡಿ ಇದೀಗ ತಮ್ಮ ನಿರ್ಧಾರ ಬದಲಿಸಿದೆ. ಟೋಕಿಯೊ ಒಲಿಂಪಿಕ್ಸ್ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿರುವುದು ಹಾಗೂ ಈ ಕ್ಷಣದಲ್ಲಿ ಯಾವುದೇ ಕ್ರೀಡಾ ಸ್ಪರ್ಧೆಗಳು ಇಲ್ಲದಿರುವ ಕಾರಣಕ್ಕೆ ಶೀಘ್ರವೇ ವಿವಾಹವಾಗಲು ನಿರ್ಧರಿಸಿದ್ದಾರೆ.

ಅತನು-ದೀಪಿಕಾ ಜೋಡಿ ಒಂದೇ ಒಲಿಂಪಿಕ್ಸ್ ನ್ನು ಪ್ರತಿನಿಧಿಸುತ್ತಿರುವ ಕೋಲ್ಕತಾದ ಎರಡನೇ ಜೋಡಿ ಎನಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿದೆ. 1972ರ ಮ್ಯೂನಿಚ್ ಒಲಿಂಪಿಕ್ಸ್‌ನಲ್ಲಿ ವೇಸ್ ಪೇಸ್ ಹಾಗೂ ಆಗಿನ ಅವರ ಪತ್ನಿ ಜೆನ್ನಿಫರ್ ಕ್ರಮವಾಗಿ ಹಾಕಿ ಹಾಗೂ ಬಾಸ್ಕೆಟ್‌ಬಾಲ್‌ನಲ್ಲಿ ಸ್ಪರ್ಧಿಸಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಅತನು ಹಾಗೂ ದೀಪಿಕಾ ಟೋಕಿಯೊದಲ್ಲಿ ಒಂದೇ ಆರ್ಚರಿ ಸ್ಪರ್ಧೆಯಲ್ಲಿ ಭಾಗವಹಿಸಬೇಕಾಗಿತ್ತು. ಕೋಲ್ಕತಾದ ಅತನು ದಾಸ್, ತರುಣ್‌ದೀಪ್ ರೈ ಹಾಗೂ ಪ್ರವೀಣ್ ಜಾಧವ್ ಜೊತೆಗೂಡಿ ವಿಶ್ವ ಚಾಂಪಿಯನ್‌ಶಿಪ್ ಕೂಟದಲ್ಲಿ ಟೀಮ್ ಕೋಟಾದಲ್ಲಿ ಸ್ಥಾನ ಪಡೆದಿದ್ದರು. ರಾಂಚಿಯ ದೀಪಿಕಾ ಕಳೆದ ವರ್ಷ ನವೆಂಬರ್‌ನಲ್ಲಿ ನಡೆದಿದ್ದ ಏಶ್ಯನ್ ಕಾಂಟಿನೆಂಟಲ್ ಕ್ವಾಲಿಫೈಯಿಂಗ್ ಟೂರ್ನಮೆಂಟ್‌ನಲ್ಲಿ ಚಿನ್ನದ ಪದಕ ಜಯಿಸುವುದರೊಂದಿಗೆ ವೈಯಕ್ತಿಕ ವಿಭಾಗದಲ್ಲಿ ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆದಿದ್ದರು. ಈ ಇಬ್ಬರು ಈ ಸಲ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿತ್ತು.

ಈ ತಿಂಗಳಾರಂಭದಲ್ಲಿ 26ನೇ ಹುಟ್ಟುಹಬ್ಬ ಆಚರಿಸಿದ್ದ ದೀಪಿಕಾ ಮೂರನೇ ಬಾರಿ ಒಲಿಂಪಿಕ್ಸ್ ನಲ್ಲಿ ಕಾಣಿಸಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ. 28ರ ಹರೆಯದ ಅತನು ಎರಡನೇ ಬಾರಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ವಿಶ್ವಾಸದಲ್ಲಿದ್ದಾರೆ.

ಈ ಇಬ್ಬರು 2008ರಲ್ಲಿ ಮೊದಲ ಬಾರಿ ಭೇಟಿಯಾಗಿದ್ದು, 2018ರಲ್ಲಿ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮಾರ್ಚ್‌ನಲ್ಲಿ ಇಡೀ ದೇಶ ಲಾಕ್‌ಡೌನ್‌ಗೆ ಒಳಗಾಗುವ ಕೆಲವೇ ಗಂಟೆಗಳ ಮೊದಲು ಈ ಜೋಡಿ ಪುಣೆಯಲ್ಲಿರುವ ರಾಷ್ಟ್ರೀಯ ಶಿಬಿರವನ್ನು ತೊರೆದು ಕೋಲ್ಕತಾಕ್ಕೆ ಪ್ರಯಾಣಿಸಿತ್ತು. ರಾಂಚಿಯಲ್ಲಿ ಸರಕಾರದ ಮಾರ್ಗಸೂಚಿಯಂತೆ ಗರಿಷ್ಠ 50 ಜನರ ಉಪಸ್ಥಿತಿಯಲ್ಲಿ ಸುರಕ್ಷಿತ ಅಂತರ ಕಾಯ್ದುಕೊಂಡು ವಿವಾಹ ಮಾಡಿಕೊಳ್ಳಲು ಅತನು ಹಾಗೂ ದೀಪಿಕಾ ನಿರ್ಧರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News