ವೆಸ್ಟ್ ಇಂಡೀಸ್ ಸರಣಿಗೆ ಇಂಗ್ಲೆಂಡ್ ತಂಡದಲ್ಲಿ ಅಮರ್ ವಿರ್ಡಿಗೆ ಸ್ಥಾನ ನಿರೀಕ್ಷೆ

Update: 2020-06-28 05:24 GMT

ಲಂಡನ್, ಜೂ.27: ವೆಸ್ಟ್ ಇಂಡೀಸ್ ವಿರುದ್ಧದ ಪ್ರವಾಸ ಸರಣಿಗೆ ಇಂಗ್ಲೆಂಡ್ ತಂಡದಲ್ಲಿ ಅಮರ್ ವಿರ್ಡಿ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ಇಂಗ್ಲೆಂಡ್ ಟೆಸ್ಟ್ ತಂಡದಲ್ಲಿ ವಿರ್ಡಿ ಸ್ಥಾನ ಪಡೆದರೆ ಮಾಂಟಿ ಪನೇಸರ್ ಮತ್ತು ರವಿ ಬೋಪಾರ ನಂತರ ಇಂಗ್ಲೆಂಡ್ ಪ್ರತಿನಿಧಿಸುವ ಮೂರನೇ ಸಿಖ್ ಆಟಗಾರನಾಗಲಿದ್ದಾರೆ.

  ವಿರ್ಡಿ ತಮ್ಮ ತಂಡದಲ್ಲಿ ಅನುಭವವನ್ನು ಹೊಂದಿಲ್ಲದಿರಬಹುದು. ಆದರೆ ಯುವ ಆಫ್-ಸ್ಪಿನ್ನರ್ ಅಮರ್ ವಿರ್ಡಿ ಜುಲೈ 8ರಿಂದ ಪ್ರಾರಂಭವಾಗುವ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಗಳಿಸುವ ವಿಶ್ವಾಸದಲ್ಲಿದ್ದಾರೆ.

  21ರ ಹರೆಯದ ವಿರ್ಡಿ ತಮ್ಮ ವೃತ್ತಿಜೀವನದಲ್ಲಿ ಕೇವಲ 23 ಪ್ರಥಮ ದರ್ಜೆ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ ಹಾಗೂ ಟೆಸ್ಟ್ ತಂಡಕ್ಕೆ ಪ್ರವೇಶಿಸಲು ಜಾಕ್ ಲೀಚ್, ಡೊಮ್ ಬೆಸ್, ಮ್ಯಾಟ್ ಪಾರ್ಕಿನ್ಸನ್ ಮತ್ತು ಮೊಯಿನ್ ಅಲಿ ಅವರಂತಹ ಹೆಚ್ಚು ಅನುಭವಿ ಸ್ಪಿನ್ನರ್‌ಗಳನ್ನು ಸ್ಪರ್ಧೆಯಲ್ಲಿ ಹಿಂದಿಕ್ಕಬೇಕಾಗುತ್ತದೆ.

‘‘ನಿಸ್ಸಂಶಯವಾಗಿ ನಾನು ಆಡಲು ಇಲ್ಲಿಗೆ ಬಂದಿದ್ದೇನೆ. ಇಲ್ಲಿಗೆ ಬಂದಾಗಲೆಲ್ಲಾ ಟೆಸ್ಟ್ ಕ್ರಿಕೆಟ್ ಆಡಲು ಬಯಸುತ್ತೇನೆ. ನಾನು ಆಡುತ್ತಿದ್ದೇನೆ ಎಂದು ಖಚಿತಪಡಿಸಿಕೊಳ್ಳಲು ನನ್ನ ಕಠಿಣ ಪ್ರಯತ್ನವನ್ನು ಮುಂದುವರಿಸಲಿದ್ದೇನೆ. ನಾನು ಖಂಡಿತವಾಗಿಯೂ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡಲು ಬಯಸುತ್ತೇನೆ. ಅಥವಾ ಕನಿಷ್ಠ ತಂಡದಲ್ಲಿರಬೇಕು’’ಎಂದು ಇಂಗ್ಲೆಂಡ್‌ನ 30 ಮಂದಿ ಆಟಗಾರರ ತಂಡದಲ್ಲಿ ಸ್ಥಾನ ಪಡೆದಿರುವ ವಿರ್ಡಿ ಹೇಳಿದ್ದಾರೆ. 23 ಪ್ರಥಮ ದರ್ಜೆ ಪಂದ್ಯಗಳಲ್ಲಿ 28.78 ರ ಸರಾಸರಿಯಲ್ಲಿ 69 ವಿಕೆಟ್‌ಗಳನ್ನು ಪಡೆದಿರುವ ವಿರ್ಡಿ ತಾನು ಯಾವಾಗಲೂ ವಿಕೆಟ್‌ಗಳನ್ನು ಪಡೆಯಲು ಎದುರು ನೋಡುತ್ತಿರುವೆನು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News