ಧೋನಿ ಬೌಲರ್‌ಗಳ ಮೇಲೆ ಹಿಡಿತ ಸಾಧಿಸಲು ಬಯಸಿದ್ದರು: ಇರ್ಫಾನ್ ಪಠಾಣ್

Update: 2020-06-29 04:03 GMT

ಹೊಸದಿಲ್ಲಿ: ವಿಶ್ವಕಪ್ ವಿಜೇತ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 2007ರಲ್ಲಿ ನಾಯಕತ್ವವನ್ನು ವಹಿಸಿಕೊಂಡಾಗ ಬೌಲರ್‌ಗಳ ಮೇಲೆ ಹಿಡಿತ ಸಾಧಿಸಲು ಬಯಸಿದ್ದರು ಎಂದು ಬಹಿರಂಗಪಡಿಸಿದ ಭಾರತದ ಮಾಜಿ ವೇಗದ ಬೌಲರ್ ಇರ್ಫಾನ್ ಪಠಾಣ್ 2013ರ ಬಳಿಕ ಬೌಲರ್‌ಗಳ ಮೇಲೆ ನಂಬಿಕೆ ಇಡುವ ಜೊತೆಗೆ ಶಾಂತಚಿತ್ತದ ನಾಯಕನಾಗಿ ರೂಪುಗೊಂಡರು ಎಂದರು.

 35ರ ಹರೆಯದ ಪಠಾಣ್, ಧೋನಿ ನಾಯಕತ್ವದಡಿ 2007ರ ಟ್ವೆಂಟಿ-20 ವಿಶ್ವಕಪ್ ಹಾಗೂ 2013ರ ಚಾಂಪಿಯನ್ಸ್ ಟ್ರೋಫಿಯಂತಹ ಪ್ರಮುಖ ಟೂರ್ನಿಗಳಲ್ಲಿ ಆಡಿದ್ದರು. ಈ ಎರಡು ಟೂರ್ನಿಗಳಲ್ಲಿ ಭಾರತ ಚಾಂಪಿಯನ್ ಆಗಿತ್ತು. ‘‘2007ರಲ್ಲಿ ಮೊದಲ ಬಾರಿ ತಂಡವನ್ನು ಮುನ್ನಡೆಸುವ ದೊಡ್ಡ ಜವಾಬ್ದಾರಿವಹಿಸಿಕೊಟ್ಟಾಗ ಅವರು ಸಹಜವಾಗಿ ರೋಮಾಂಚಿತ ರಾಗಿದ್ದರು. 2007 ಹಾಗೂ 2013ರಲ್ಲಿ ಟೀಮ್ ಮೀಟಿಂಗ್‌ಗಳು ಕೇವಲ ಐದು ನಿಮಿಷಗಳಲ್ಲಿ ಕೊನೆಗೊಂಡಿತ್ತು’’ ಎಂದು ಸ್ಟಾರ್ ಸ್ಪೋರ್ಟ್‌ನ ಕ್ರಿಕೆಟ್ ಕನೆಕ್ಟೆಡ್‌ಗೆ ನೀಡಿರುವ ಸಂದರ್ಶನದಲ್ಲಿ ಪಠಾಣ್ ಹೇಳಿದ್ದಾರೆ.

ಧೋನಿಯವರಲ್ಲಿ ತಾನು ಗಮನಿಸಿದ ಒಂದು ಬದಲಾವಣೆಯ ಕುರಿತು ಮಾತನಾಡಿದ ಪಠಾಣ್,‘‘2007ರಲ್ಲಿ ಅವರು ಲವಲವಿಕೆಯಿಂದ ವಿಕೆಟ್‌ಕೀಪಿಂಗ್ ಜಾಗದಿಂದ ಬೌಲರ್ ಎಂಡ್ ಕಡೆಗೆ ಓಡುತ್ತಿದ್ದರು. ಬೌಲರ್‌ಗಳನ್ನು ನಿಯಂತ್ರಿಸಲು ಯತ್ನಿಸುತ್ತಿದ್ದರು. ಆದರೆ 2013ರ ವೇಳೆಗೆ ಬೌಲರ್‌ಗಳ ಮೇಲೆ ವಿಶ್ವಾಸ ಬೆಳೆಸಿಕೊಂಡಿದ್ದರು. ಅವರು ಶಾಂತಚಿತ್ತರಾಗಿ, ತಮ್ಮ ಮೇಲೆ ನಿಯಂತ್ರಣ ಇಟ್ಟುಕೊಂಡಿದ್ದರು. ಅವರು ಶಾಂತ ಸ್ವಭಾವದ ವ್ಯಕ್ತಿ’’ಎಂದು ಹೇಳಿದರು.

ಕಳೆದ ವರ್ಷ ಏಕದಿನ ವಿಶ್ವಕಪ್‌ನ ಸೆಮಿ ಫೈನಲ್‌ನಲ್ಲಿ ಆಡಿದ ಬಳಿಕ ಧೋನಿ ಯಾವುದೇ ಕ್ರಿಕೆಟ್ ಆಡಿಲ್ಲ. ಅವರು 2007ರಿಂದ 2016ರ ತನಕ ಸೀಮಿತ ಓವರ್ ಮಾದರಿಯ ಕ್ರಿಕೆಟ್ ಹಾಗೂ 2008ರಿಂದ 2014ರ ತನಕ ಟೆಸ್ಟ್ ಕ್ರಿಕೆಟ್‌ನಲ್ಲಿ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು. 38ರ ಹರೆಯದ ಧೋನಿ ಎಲ್ಲ ಐಸಿಸಿ ಟ್ರೋಫಿಗಳನ್ನು ಗೆದ್ದುಕೊಂಡಿರುವ ಏಕೈಕ ನಾಯಕನಾಗಿದ್ದಾರೆ.

ಧೋನಿ ನಾಯಕತ್ವದಲ್ಲಿ ಭಾರತ 2007ರ ಟ್ವೆಂಟಿ-20 ವಿಶ್ವಕಪ್, 2010 ಹಾಗೂ 2016ರ ಏಶ್ಯಕಪ್‌ಗಳು, 2011ರ ಏಕದಿನ ವಿಶ್ವಕಪ್ ಹಾಗೂ 2013ರ ಚಾಂಪಿಯನ್ಸ್ ಟ್ರೋಫಿಯನ್ನು ಬಾಚಿಕೊಂಡಿತ್ತು. ‘‘2013ರಿಂದ ಧೋನಿ ಅವರು ಪಂದ್ಯದ ನಿರ್ಣಾಯಕ ಘಟ್ಟಗಳಲ್ಲಿ ಸ್ಪಿನ್ನರ್‌ಗಳನ್ನು ದಾಳಿಗಿಳಿಸುವ ಯೋಜನೆ ಆರಂಭಿಸಿದರು. 2007ರ ಹಾಗೂ 2013ರ ಮಧ್ಯೆದಲ್ಲಿ ಅವರು ನಿಧಾನಗತಿಯ ಹಾಗೂ ಸ್ಪಿನ್ ಬೌಲರ್‌ಗಳ ಮೇಲೆ ವಿಶ್ವಾಸ ಇಡುವ ಅನುಭವ ಪಡೆದರು. ಚಾಂಪಿಯನ್ಸ್ ಟ್ರೋಫಿ ಸಮಯದಲ್ಲಿ ನಿರ್ಣಾಯಕ ಸಂದರ್ಭದಲ್ಲಿ ಸ್ಪಿನ್ನರ್‌ಗಳನ್ನು ಹೇಗೆ ಬಳಸಬೇಕೆಂಬ ಬಗ್ಗೆ ಧೋನಿ ಸ್ಪಷ್ಟ ಅರಿವನ್ನು ಹೊಂದಿದ್ದರು’’ಎಂದು ಪಠಾಣ್ ನೆನಪಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News