ಸ್ವಯಂ ಪ್ರತ್ಯೇಕವಾಸದ ಮೊರೆ ಹೋದ ವಿಂಡೀಸ್ ಕೋಚ್ ಸಿಮೊನ್ಸ್

Update: 2020-06-29 04:14 GMT

ಮ್ಯಾಂಚೆಸ್ಟರ್, ಜೂ.28: ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ವೆಸ್ಟ್‌ಇಂಡೀಸ್ ಮುಖ್ಯ ಕೋಚ್ ಫಿಲ್ ಸಿಮೊನ್ಸ್ ಸ್ವಯಂ ಪ್ರತ್ಯೇಕವಾಸದ ಮೊರೆ ಹೋಗಿದ್ದಾರೆ. ಕೋಚ್ ಸಿಮೊನ್ಸ್‌ರ ಈ ನಿರ್ಧಾರದಿಂದ ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ತಂಡದ ತಯಾರಿಯ ಮೇಲೆ ಯಾವುದೇ ಪರಿಣಾಮಬೀರದು ಎಂದು ವಿಂಡೀಸ್ ವೇಗದ ಬೌಲರ್ ಅಲ್ಝಾರಿ ಜೋಸೆಫ್ ಹೇಳಿದ್ದಾರೆ.

ಶುಕ್ರವಾರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಸಿಮೊನ್ಸ್ ಆ ನಂತರ ಓಲ್ಡ್ ಟ್ರಾಫೋರ್ಡ್‌ನಲ್ಲಿರುವ ಹೊಟೇಲ್ ಕೊಠಡಿಯಲ್ಲಿ ಸ್ವಯಂ ಪ್ರತ್ಯೇಕವಾಸದಲ್ಲಿದ್ದಾರೆ. ಗುರುವಾರ ತಂಡವನ್ನು ಸೇರಿಕೊಳ್ಳುವ ಮೊದಲು ಎರಡು ಕೋವಿಡ್-19 ಪರೀಕ್ಷೆಗಳಲ್ಲಿ ಪಾಸಾಗಬೇಕಾಗಿದೆ.

‘‘ಇದು ನಿಜಕ್ಕೂ ನಮ್ಮ ತಯಾರಿಯ ಮೇಲೆ ಪರಿಣಾಮಬೀರದು. ನಮಗೆ ನಮ್ಮದೇ ಆದ ಕೆಲಸವಿರುತ್ತದೆ. ಇಲ್ಲಿ ನಮಗೆ ಅತ್ಯಂತ ದೊಡ್ಡ ಕೋಚಿಂಗ್ ಸಿಬ್ಬಂದಿ ಇದ್ದಾರೆ. ಎಲ್ಲರೂ ಪರಸ್ಪರ ಪ್ರೋತ್ಸಾಹ ನೀಡುತ್ತಾರೆ. ಹೀಗಾಗಿ ಕೋಚ್ ಅವರ ನಿರ್ಧಾರ ಯಾರಿಗೂ ತೊಂದರೆಯಾಗದು’’ ಎಂದು ಜೋಸೆಫ್, ಬ್ರಿಟಿಷ್ ಮೀಡಿಯಾಕ್ಕೆ ಶನಿವಾರ ತಿಳಿಸಿದರು.

ಸೋಮವಾರದಿಂದ ಆರಂಭವಾಗಲಿರುವ ತಂಡದ ಎರಡನೇ ಅಭ್ಯಾಸ ಪಂದ್ಯದ ಉಸ್ತುವಾರಿಯನ್ನ್ನು ಸಹಾಯಕ ಕೋಚ್‌ಗಳಾದ ರಾಡಿ ಎಸ್ಟ್‌ವಿಕ್ ಹಾಗೂ ರಯಾನ್ ಗ್ರಿಫಿತ್ ನೋಡಿಕೊಳ್ಳಲಿದ್ದಾರೆ. ಜುಲೈ 8ರಿಂದ ಸೌತಾಂಪ್ಟನ್‌ನಲ್ಲಿ ಟೆಸ್ಟ್ ಸರಣಿಯ ಮೊದಲ ಪಂದ್ಯ ಆರಂಭವಾಗಲಿದೆ.

ಜೋಸೆಫ್ ಅವರು ನಾಯಕ ಜೇಸನ್ ಹೋಲ್ಡರ್, ಕೆಮರ್ ರೋಚ್ ಹಾಗೂ ಶನೊನ್ ಗ್ಯಾಬ್ರಿಯೆಲ್ ಅವರಿದ್ದ ವೇಗದ ಬೌಲಿಂಗ್ ವಿಭಾಗದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News