ವರ್ಣಭೇದ ನೀತಿಯನ್ನು ಗಂಭೀರವಾಗಿ ಪರಿಗಣಿಸಬೇಕು: ಜೇಸನ್ ಹೋಲ್ಡರ್

Update: 2020-06-29 04:26 GMT

ಲಂಡನ್: ವರ್ಣಭೇದ ನೀತಿಯನ್ನು ಕ್ರಿಕೆಟ್‌ನಲ್ಲಿನ ಡೋಪಿಂಗ್ ಹಾಗೂ ಮ್ಯಾಚ್ ಫಿಕ್ಸಿಂಗ್ ಪ್ರಕರಣದಂತೆಯೇ ಗಂಭೀರವಾಗಿ ಪರಿಗಣಿಸಬೇಕು ಎಂದು ವೆಸ್ಟ್‌ಇಂಡೀಸ್ ನಾಯಕ ಹೋಲ್ಡರ್ ಆಗ್ರಹಿಸಿದ್ದಾರೆ.

ಕಳೆದ ವರ್ಷ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಆ್ಯಂಡಿಲ್ ಫೆಹ್ಲುಕ್ವಾವೊಗೆ ಜನಾಂಗೀಯ ನಿಂದನೆ ಮಾಡಿದ್ದ ಪಾಕಿಸ್ತಾನದ ನಾಯಕ ಸರ್ಫರಾಝ್ ಅಹ್ಮದ್‌ಗೆ ನಾಲ್ಕು ಪಂದ್ಯಗಳಿಂದ ನಿಷೇಧ ಹೇರಲಾಗಿತ್ತು.

ತಾವಿಬ್ಬರೂ ಜನಾಂಗೀಯ ನಿಂದನೆ ಎದುರಿಸಿದ್ದೇವೆ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದ ವೆಸ್ಟ್ ಇಂಡೀಸ್‌ನ ಮಾಜಿ ನಾಯಕರುಗಳಾದ ಡರೆನ್ ಸಮ್ಮಿ ಹಾಗೂ ಕ್ರಿಸ್ ಗೇಲ್, ಅಮೆರಿಕದಲ್ಲಿ ಪೊಲೀಸ್ ದೌರ್ಜನ್ಯಕ್ಕೆ ಬಲಿಯಾದ ಕರಿಯ ಪ್ರಜೆ ಜಾರ್ಜ್ ಫ್ಲಾಯ್ಡಾ ಪರ ಆಯೋಜಿಸಿದ್ದ ‘ಬ್ಲಾಕ್ ಲೈವ್ಸ್ ಮ್ಯಾಟರ್ಸ್’ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು.

‘‘ಡೋಪಿಂಗ್ ಅಥವಾ ಭ್ರಷ್ಟಾಚಾರಕ್ಕಾಗಿ ವಿಧಿಸುವ ದಂಡವು ವರ್ಣಭೇದ ನೀತಿಗಿಂತ ಭಿನ್ನವಾಗಿರಬೇಕು ಎಂದು ನಾನು ಭಾವಿಸುವುದಿಲ್ಲ. ನಮ್ಮ ಕ್ರೀಡೆಯಲ್ಲಿ ನಮಗೆ ಸಮಸ್ಯೆಯಿದ್ದರೆ ನಾವು ಅವರೊಂದಿಗೆ ಸಮಾನವಾಗಿ ವ್ಯವಹರಿಸಬೇಕು’’ ಎಂದು ಬಿಬಿಸಿ ಸ್ಪೋರ್ಟ್ಸ್‌ಗೆ ಹೋಲ್ಡರ್ ತಿಳಿಸಿದ್ದಾರೆ.

  ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ ವರ್ಣಬೇಧ ನೀತಿ ಸಂಹಿತೆಯ ಅಡಿ ಆಟಗಾರ ಮೂರನೇ ಬಾರಿ ನಿಯಮ ಉಲ್ಲಂಘಿಸಿದರೆ ಆಜೀವ ಪರ್ಯಂತ ನಿಷೇಧ ಎದುರಿಸಬೇಕಾಗುತ್ತದೆ. ಆಟಗಾರ ಮೊದಲ ಬಾರಿ ತಪ್ಪು ಮಾಡಿದರೆ ನಾಲ್ಕು ಟೆಸ್ಟ್ ಅಥವಾ 8 ಸೀಮಿತ ಓವರ್ ಕ್ರಿಕೆಟ್ ಪಂದ್ಯಗಳಿಂದ ನಿಷೇಧ ಎದುರಿಸಬೇಕಾಗುತ್ತದೆ.

‘‘ನಾವು ಸರಣಿಯನ್ನು ಆರಂಭಿಸುವ ಮೊದಲು ಉದ್ದೀಪನ ಮದ್ದು ನಿಗ್ರಹ ಹಾಗೂ ಭ್ರಷ್ಟಾಚಾರ ನಿಗ್ರಹ ಕುರಿತ ಮಾಹಿತಿ ನೀಡುವ ಮೊದಲು ವರ್ಣಭೇದ ನೀತಿ ವಿರೋಧಿ ವೈಶಿಷ್ಟವನ್ನು ಹೊಂದಿರಬೇಕು. ನಾನು ಯಾವುದೆ ಜನಾಂಗೀಯ ನಿಂದನೆಯನ್ನು ಮೊದಲ ಬಾರಿ ಎದುರಿಸಿಲ್ಲ. ಆದರೆ ಅದರ ಸುತ್ತಲೂ ಕೆಲವು ವಿಷಯ ಕೇಳಿದ್ದೇನೆ ಅಥವಾ ನೋಡಿದ್ದೇನೆ’’ ಎಂದು ಆಲ್‌ರೌಂಡರ್‌ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News