ಹಾಂಕಾಂಗ್: ರಾಷ್ಟ್ರೀಯ ಭದ್ರತಾ ಕಾನೂನಿಡಿ ಮೊದಲ ಬಂಧನ

Update: 2020-07-01 17:16 GMT

ಹಾಂಕಾಂಗ್, ಜು. 1: ಹಾಂಕಾಂಗ್‌ಗಾಗಿ ಚೀನಾ ಮಂಗಳವಾರ ಜಾರಿಗೊಳಿಸಿದ ನೂತನ ರಾಷ್ಟ್ರೀಯ ಭದ್ರತಾ ಕಾನೂನಿನಡಿ ಮೊದಲ ಬಂಧನವನ್ನು ಮಾಡಲಾಗಿದೆ ಎಂದು ಹಾಂಕಾಂಗ್ ಪೊಲೀಸರು ಬುಧವಾರ ಹೇಳಿದ್ದಾರೆ. ಹಾಂಕಾಂಗ್ ಸ್ವತಂತ್ರ ಧ್ವಜವನ್ನು ಹೊಂದಿದ್ದ ಆರೋಪದಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿದೆ.

‘‘ರಾಷ್ಟ್ರೀಯ ಭದ್ರತಾ ಕಾನೂನನ್ನು ಉಲ್ಲಂಸಿ ಹಾಂಕಾಂಗ್‌ನ ಕಾಸ್‌ವೇ ಬೇ ಎಂಬಲ್ಲಿ ‘ಹಾಂಕಾಂಗ್ ಸ್ವತಂತ್ರ ಧ್ವಜ’ವನ್ನು ಹೊಂದಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ’’ ಎಂಬುದಾಗಿ ಹಾಂಕಾಂಗ್ ಪೊಲೀಸರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದಿದ್ದಾರೆ. ಅದರಲ್ಲಿ ಬಂಧಿತ ಮತ್ತು ಧ್ವಜದ ಚಿತ್ರವನ್ನೂ ಹಾಕಿದ್ದಾರೆ.

‘‘ಕಾನೂನು ಅನುಷ್ಠಾನಕ್ಕೆ ಬಂದ ಬಳಿಕ ಮಾಡಲಾದ ಮೊದಲ ಬಂಧನ ಇದಾಗಿದೆ’’ ಎಂದು ಪೊಲೀಸರು ಹೇಳಿದ್ದಾರೆ.

ಪ್ರತಿಭಟನಕಾರರ ಮೇಲೆ ಜಲಫಿರಂಗಿ ಧಾರೆ

ಪ್ರತಿಭಟನಾ ಸಭೆಗಳ ಮೇಲೆ ವಿಧಿಸಲಾಗಿರುವ ನಿಷೇಧವನ್ನು ಧಿಕ್ಕರಿಸಿ, ಬುಧವಾರ ವಾಣಿಜ್ಯ ಮಳಿಗೆಯೊಂದರ ಸಮೀಪ ಜಮಾಯಿಸಿದ ಪ್ರತಿಭಟನಕಾರರ ಸಣ್ಣ ಗುಂಪೊಂದನ್ನು ಚದುರಿಸಲು ಹಾಂಕಾಂಗ್ ಪೊಲೀಸರು ಜಲಫಿರಂಗಿ ಧಾರೆಯನ್ನು ಬಳಸಿದ್ದಾರೆ. ಹಾಂಕಾಂಗ್‌ಗಾಗಿ ಕಠಿಣ ರಾಷ್ಟ್ರೀಯ ಭದ್ರತಾ ಕಾನೂನನ್ನು ಚೀನಾ ಸಂಸತ್ತು ಅಂಗೀಕರಿಸಿದ ಒಂದು ದಿನದ ಬಳಿಕ ಈ ಬೆಳವಣಿಗೆ ಸಂಭವಿಸಿದೆ.

ಕಾಸ್‌ವೇ ಬೇ ಎಂಬಲ್ಲಿ ಜಲಫಿರಂಗಿಯನ್ನು ಹೊತ್ತ ಟ್ರಕ್ಕೊಂದು ಪ್ರತಿಭಟನಕಾರರು ಮತ್ತು ಪತ್ರಕರ್ತರ ಮೇಲೆ ಮೆಣಸಿನಹುಡಿಯ ದ್ರಾವಣ ಬೆರೆಸಿದ ನೀರನ್ನು ಹಲವು ಬಾರಿ ಸಿಡಿಸಿತು ಎಂದು ಎಎಫ್‌ಪಿ ವರದಿಗಾರರು ವರದಿ ಮಾಡಿದ್ದಾರೆ.

ಇದು ನಿಮಗೆ ಸಂಬಂಧವಿಲ್ಲದ್ದು: ಚೀನಾ

ಹಾಂಕಾಂಗ್‌ಗಾಗಿ ತಾನು ಅಂಗೀಕರಿಸಿದ ನೂತನ ವಿವಾದಾಸ್ಪದ ರಾಷ್ಟ್ರೀಯ ಭದ್ರತಾ ಕಾನೂನಿಗೆ ವ್ಯಕ್ತವಾದ ಅಂತರ್‌ರಾಷ್ಟ್ರೀಯ ಟೀಕೆಗಳನ್ನು ಚೀನಾ ತಿರಸ್ಕರಿಸಿದೆ ಹಾಗೂ ಇದರಲ್ಲಿ ಇತರ ದೇಶಗಳು ಮೂಗು ತೂರಿಸಬಾರದು ಎಂದು ಬುಧವಾರ ಹೇಳಿದೆ.

ಹಾಂಕಾಂಗ್‌ಗೆ ಅನ್ವಯಿಸುವ ಚೀನಾದ ನೂತನ ಕಾನೂನು ಹಾಂಕಾಂಗ್‌ನ ಸ್ವಾತಂತ್ರ್ಯಗಳನ್ನು ಮೊಟಕುಗೊಳಿಸುತ್ತದೆ ಎಂದು ಪಾಶ್ಚಾತ್ಯ ದೇಶಗಳು ಮತ್ತು ಟೀಕಾಕಾರರು ಎಚ್ಚರಿಸಿದ್ದಾರೆ.

‘‘ಇದಕ್ಕೂ ನಿಮಗೂ ಏನು ಸಂಬಂಧ? ಇದರಲ್ಲಿ ಮೂಗು ತೂರಿಸಬೇಡಿ’’ ಎಂಬುದಾಗಿ ಚೀನಾದ ಸ್ಟೇಟ್ ಕೌನ್ಸಿಲ್‌ನ ಹಾಂಕಾಂಗ್ ಮತ್ತು ಮಕಾವ್ ವ್ಯವಹಾರಗಳ ಕಚೇರಿಯ ವಕ್ತಾರ ಝಾಂಗ್ ಕ್ಸಿಯಾವೊಮಿಂಗ್ ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News