ವಿಂಡೀಸ್ ಗ್ರೇಟ್ ಸರ್ ಎವರ್ಟನ್ ನಿಧನ

Update: 2020-07-03 05:26 GMT

ಬಾರ್ಬಡಾಸ್, ಜು.2: ವೆಸ್ಟ್ ಇಂಡೀಸ್‌ನ ಶ್ರೇಷ್ಠ ಕ್ರಿಕೆಟ್ ದಂತಕತೆ ಸರ್ ಎವರ್ಟನ್ ವೀಕೆಸ್ ಬುಧವಾರ ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು. ಬಾರ್ಬಡಾಸ್ ಮೂಲದ ವೀಕೆಸ್ ತನ್ನ 22 ನೇ ವಯಸ್ಸಿನಲ್ಲಿ ಇಂಗ್ಲೆಂಡ್ ವಿರುದ್ಧ 1948 ರಲ್ಲಿ ಕೆನ್ಸಿಂಗ್ಟನ್ ಓವಲ್‌ನಲ್ಲಿ ಆಡುವ ಮೂಲಕ ಟೆಸ್ಟ್ ಕ್ರಿಕೆಟ್ ಪ್ರವೇಶಿಸಿದ್ದರು. ವೀಕೆಸ್ 48 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಪ್ರತಿ ಇನಿಂಗ್ಸ್ ನಲ್ಲಿ 58.61 ಸರಾಸರಿಯಲ್ಲಿ 4,455 ರನ್ ಗಳಿಸಿದ್ದಾರೆ. 143 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ವೀಕೆಸ್ 5 ಟೆಸ್ಟ್ ಇನಿಂಗ್ಸ್‌ನಲ್ಲಿ ಸತತ ಐದು ಶತಕ ದಾಖಲಿಸಿದ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ. ಐದು ಶತಕಗಳು 1948ರಲ್ಲಿ ದಾಖಲಾಗಿತ್ತು. ಜಮೈಕಾದಲ್ಲಿ ಇಂಗ್ಲೆಂಡ್ ವಿರುದ್ಧ 141 ರನ್, ನಂತರ ಭಾರತದಲ್ಲಿ 128, 194, 162 ಮತ್ತು 101 ಸ್ಕೋರ್ ದಾಖಲಿಸಿದ್ದರು. ಅವರ ಮುಂದಿನ ಇನಿಂಗ್ಸ್‌ನಲ್ಲಿ ಅವರು 90 ರನ್ ಗಳಿಸಿ ರನೌಟಾಗಿದ್ದರು. ಒಂದು ದಶಕದ ನಂತರ ಟ್ರಿನಿಡಾಡ್‌ನಲ್ಲಿ ಪಾಕಿಸ್ತಾನ ವಿರುದ್ಧ ಆಡಿರುವುದು ಅವರ ವೃತ್ತಿ ಬದುಕಿನ ಕೊನೆಯ ಟೆಸ್ಟ್ ಪಂದ್ಯವಾಗಿತ್ತು.

  ಅವರು ಫ್ರಾಂಕ್ ವೊರೆಲ್ ಮತ್ತು ಕ್ಲೈಡ್ ವಾಲ್ಕಾಟ್ ಅವರೊಂದಿಗೆ ಆಡಿದ್ದರು. ವೇಕೆಸ್ ಅತ್ಯಂತ ಗೌರವಾನ್ವಿತ ಕೋಚ್, ವಿಶ್ಲೇಷಕ, ತಂಡದ ವ್ಯವಸ್ಥಾಪಕ, ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಮ್ಯಾಚ್ ರೆಫರಿ ಮತ್ತು ಐಸಿಸಿ ಹಾಲ್ ಆಫ್ ಫೇಮ್ ಸದಸ್ಯರಾಗಿದ್ದರು.

 ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರು 152 ಪಂದ್ಯಗಳನ್ನು ಆಡಿದ್ದಾರೆ ಮತ್ತು 55.34 ರ ಸರಾಸರಿಯಲ್ಲಿ 12,010 ರನ್ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News