ಐಪಿಎಲ್ 2020: ಯುಎಇ ಅಥವಾ ಶ್ರೀಲಂಕಾದಲ್ಲಿ ನಡೆಯುವ ಸಾಧ್ಯತೆ

Update: 2020-07-03 05:28 GMT

ಮುಂಬೈ, ಜು.2:ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಿಯ 13ನೇ ಆವೃತ್ತಿಯು ಯುಎಇ ಅಥವಾ ಶ್ರೀಲಂಕಾದಲ್ಲಿ ನಡೆಯುವ ಸಾಧ್ಯತೆಯಿದೆ.

 ಉಭಯ ದೇಶಗಳು 2020ರ ನಗದು ಸಮೃದ್ಧ ಐಪಿಎಲ್ ಲೀಗ್‌ನ ಆತಿಥ್ಯ ವಹಿಸುವ ಸ್ಪರ್ಧೆಯಲ್ಲಿವೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

 ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯದಲ್ಲಿ ನಡೆಯಬೇಕಿದ್ದ ಟ್ವೆಂಟಿ-20 ವಿಶ್ವಕಪ್ ಭವಿಷ್ಯದ ಬಗ್ಗೆ ಅಧಿಕೃತ ನಿರ್ಧಾರಕ್ಕಾಗಿ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇನ್ನೂ ಕಾಯುತ್ತಿರುವ ಕಾರಣ ಅಂತಿಮ ಪ್ರಕಟನೆ ಶೀಘ್ರದಲ್ಲೇ ನಿರೀಕ್ಷಿಸಲಾಗಿದೆ.

 ದೇಶದಲ್ಲಿ ಲೀಗ್ ಆಡುವ ಆಲೋಚನೆ ಇದ್ದರೂ ಕೊರೋನ ವೈರಸ್ ಸಾಂಕ್ರಾಮಿಕ ರೋಗ ಇನ್ನೂ ನಿಯಂತ್ರಣಕ್ಕೆ ಬಾರದಿರುವ ಹಿನ್ನೆಲೆಯಲ್ಲಿ ಪಂದ್ಯಾವಳಿಯನ್ನು ಯುಎಇ ಅಥವಾ ಶ್ರೀಲಂಕಾದಲ್ಲಿ ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರಂಭದಲ್ಲಿ ದೇಶದಲ್ಲೇ ಐಪಿಎಲ್ ಟೂರ್ನಿ ಆಯೋಜಿಸುವ ಚಿಂತನೆ ನಡೆದಿತ್ತು. ಪ್ರಸ್ತುತ ಪರಿಸ್ಥಿತಿಯು ಪಂದ್ಯಾವಳಿಯನ್ನು ಭಾರತದ ಹೊರಗೆ ನಡೆಸಬೇಕಾಗಿರುವುದು ಅನಿವಾರ್ಯ ಎಂದು ಅವರು ಹೇಳಿದ್ದಾರೆ. ಮುಚ್ಚಿದ ಬಾಗಿಲುಗಳ ಹಿಂದೆ ಲೀಗ್ ಆಡುವುದಿದ್ದರೆ ಸ್ಥಳವು ಕಳವಳಕಾರಿಯಾಗಬಾರದು ಎಂದು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಕೂಡ ಧ್ವನಿ ಎತ್ತಿದ್ದಾರೆ.

ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಮತ್ತು ಶ್ರೀಲಂಕಾ ಕ್ರಿಕೆಟ್ ಐಪಿಎಲ್ ಆತಿಥ್ಯ ವಹಿಸಲು ತಯಾರಿದ್ದೇವೆ ಎಂದು ಬಿಸಿಸಿಐಗೆ ಮಾಹಿತಿ ನೀಡಿವೆ. ಆದರೆ ನಮಗೆ ಸರಕಾರದ ಅನುಮತಿ ಸಿಕ್ಕಿದರೆ ನಮ್ಮ ಮೊದಲ ಆದ್ಯತೆ ಭಾರತದಲ್ಲಿ ಐಪಿಎಲ್ ಟೂರ್ನಿಯನ್ನು ಆಯೋಜಿಸುವುದಾಗಿದೆ ಎಂದು ಪಟೇಲ್ ಹೇಳಿದ್ದಾರೆ.

‘‘ನಮಗೆ ಭಾರತದ ಮೂರು ಅಥವಾ ನಾಲ್ಕು ಸ್ಥಳಗಳಿಗಿಂತ ಹೆಚ್ಚು ಸ್ಥಳಗಳಲ್ಲಿ ಆಟವಾಡಲು ಸಾಧ್ಯವಿಲ್ಲ ಎಂಬುದು ಖಚಿತ. ಆದರೆ ಸರಕಾರದ ಅನುಮತಿಯು ಕೋವಿಡ್ -19 ಕಾರಣದಿಂದಾಗಿ ಮುಂದೆ ಪರಿಸ್ಥಿತಿ ಹೇಗಿರುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಇಲ್ಲದಿದ್ದರೆ ನಾವು ವಿದೇಶಗಳಲ್ಲಿ ಆಡುವುದನ್ನು ಅನ್ವೇಷಿಸಬೇಕಾಗುತ್ತದೆ. ಅದು ಕೊನೆಯ ಆಯ್ಕೆಯಾಗಿದೆ. ’’ ಎಂದು ಪಟೇಲ್ ಆಂಗ್ಲ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News