ಐಸಿಸಿ ನಿರ್ಗಮನ ಅಧ್ಯಕ್ಷರು ಭಾರತದ ಕ್ರಿಕೆಟ್ ಗೆ ಹಾನಿ ಮಾಡಿದ್ದಾರೆ: ಶಾ ಆರೋಪ

Update: 2020-07-03 05:32 GMT

ಹೊಸದಿಲ್ಲಿ, ಜು.2: ಐಸಿಸಿ ನಿರ್ಗಮನ ಅಧ್ಯಕ್ಷ ಶಶಾಂಕ್ ಮನೋಹರ್ ಭಾರತದ ಕ್ರಿಕೆಟ್‌ಗೆ ಹಾನಿ ಮಾಡಿದ್ದಾರೆ. ಅವರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಬಿಸಿಸಿಐ ಮಾಜಿ ಕಾರ್ಯದರ್ಶಿ ನಿರಂಜನ್ ಶಾ ಆರೋಪಿಸಿದ್ದಾರೆ.

ಮಾಜಿ ಬಿಸಿಸಿಐ ಅಧ್ಯಕ್ಷರಾಗಿದ್ದ ಮನೋಹರ್ ಮೂರನೇ ಅವಧಿಗೆ ಐಸಿಸಿ ಅಧ್ಯಕ್ಷರಾಗಿ ಮುಂದುವರಿಯುವ ವಿಚಾರದ ಬಗ್ಗೆ ಬಹುತೇಕ ಮಂದಿ ವಿರೋಧಿಸಿದ ಕಾರಣದಿಂದಾಗಿ ಮನೋಹರ್ ಅವರು ಎರಡು ಎರಡು ವರ್ಷಗಳ ಅವಧಿಯ ನಂತರ ಬುಧವಾರ ಕೆಳಗಿಳಿದರು.

ಐಸಿಸಿ ಸದಸ್ಯ ರಾಷ್ಟ್ರಗಳ ಪೈಕಿ ಇಂಗ್ಲೆಂಡ್, ಆಸ್ಟ್ರೇಲಿಯ ಮತ್ತು ಭಾರತವು ಆದಾಯದ ದೊಡ್ಡ ಮೊತ್ತವನ್ನು ಹಂಚಿಕೊಳ್ಳುವ ‘ಬಿಗ್ ತ್ರಿ’ ಮಾದರಿಯನ್ನು ರದ್ದುಗೊಳಿಸುವಲ್ಲಿ ಶಶಾಂಕ್ ಮನೋಹರ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಬಿಸಿಸಿಐ ಟೀಕಿಸುತ್ತಿದೆ. ‘ಬಿಗ್ ತ್ರಿ ವ್ಯವಸ್ಥೆ ’ ಅಂದರೆ ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯದಂತಹ ದೇಶಗಳ ಕ್ರಿಕೆಟ್ ಮಂಡಳಿಗಳಿಗೆ ಉಳಿದ ದೇಶಗಳ ಮಂಡಳಿಗಿಂತ ಹೆಚ್ಚು ಆದಾಯ ಹಂಚಿಕೆಯಾಗುತ್ತಿತ್ತು. ಆದರೆ ಶಶಾಂಕ್ ಮನೋಹರ್ ಈ ವ್ಯವಸ್ಥೆಗೆ ಧಕ್ಕೆಯನ್ನುಂಟು ಮಾಡಿದ್ದಾರೆ ಎನ್ನುವುದು ಶಾ ಆರೋಪ.

ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್‌ನ ಅಭಿವೃದ್ಧಿಗೆ ಏನು ಮಾಡಬಹುದಿತ್ತು ಮತ್ತು ಅವರ ಅಧಿಕಾರಾವಧಿಯಲ್ಲಿ ಭಾರತದಲ್ಲಿ ಕ್ರಿಕೆಟಿಗೆ ಏನು ಮಾಡಿದ್ದಾರೆ ಎಂಬ ವಿಚಾರದ ಬಗ್ಗೆ ಶಶಾಂಕ್ ಮನೋಹರ್ ಮಿಶ್ರ ಭಾವನೆ ಹೊಂದಿದ್ದಾರೆ ಎಂದು ಬಿಸಿಸಿಐ ಮಾಜಿ ಕಾರ್ಯದರ್ಶಿಯಾಗಿರುವ ಶಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಐಸಿಸಿ ಅಧ್ಯಕ್ಷ ಸ್ಥಾನದಿಂದ ಈಗ ನಿರ್ಗಮಿಸಿರುವ ಮನೋಹರ್ ತನ್ನ ಅಧಿಕಾರಾವಧಿಯಲ್ಲಿ ಭಾರತೀಯ ಕ್ರಿಕೆಟ್ ಮತ್ತು ಬಿಸಿಸಿಐಗೆ ಏನು ಹಾನಿಯಾಗಿದೆ ಎಂದು ಮೌಲ್ಯಮಾಪನ ಮಾಡಬಹುದು ಎಂದು ಶಾ ಹೇಳಿದರು. ಕಳೆದ ಒಂದೆರಡು ವರ್ಷಗಳಲ್ಲಿ ಬಿಸಿಸಿಐ ಹೆಚ್ಚಿನ ಪ್ರಕ್ಷುಬ್ಧತೆಯನ್ನು ಎದುರಿಸಿತು. ಇದೇ ವೇಳೆ ಐಸಿಸಿ ಭಾರತದ ಕ್ರಿಕೆಟ್ ಮತ್ತು ಭಾರತದ ಕ್ರಿಕೆಟ್ ಮಂಡಳಿಗೆ ಹಾನಿಯನ್ನುಂಟು ಮಾಡಿ ಪ್ರಯೋಜನವನ್ನು ಪಡೆದುಕೊಂಡಿತು ಎಂದು ಶಾ ಅಪಾದಿಸಿದ್ದಾರೆ. ‘‘ಬಿಸಿಸಿಐನ ಈಗಿನ ಬಲಿಷ್ಠ ಮತ್ತು ಸಮರ್ಥ ನಾಯಕತ್ವ ಐಸಿಸಿಯಲ್ಲಿ ಬಲವಾದ ಪ್ರಯೋಜನಕಾರಿ ಮತ್ತು ರಚನಾತ್ಮಕ ಪ್ರಾತಿನಿಧ್ಯ ಮತ್ತು ಉಪಕ್ರಮಗಳನ್ನು ಹೊಂದಿರುತ್ತವೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ ’’ಎಂದು ಶಾ ಹೇಳಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News