ಆಜೀವ ನಿಷೇಧವನ್ನು ಮರುಪರಿಶೀಲಿಸಲು ಬಿಸಿಸಿಐ, ಎಂಸಿಎಗೆ ಚವಾಣ್ ಮನವಿ

Update: 2020-07-03 05:34 GMT

ಹೊಸದಿಲ್ಲಿ, ಜು.2: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾದ ಆರೋಪದಲ್ಲಿ ತನಗೆ ವಿಧಿಸಲಾದ ಜೀವಾವಧಿ ನಿಷೇಧವನ್ನು ಮರುಪರಿಶೀಲಿಸುವಂತೆ ರಾಜಸ್ಥಾನ ರಾಯಲ್ಸ್ ನ ಮಾಜಿ ಆಟಗಾರ ಅಂಕಿತ್ ಚವಾಣ್ ಅವರು ಭಾರತೀಯ ಕ್ರಿಕೆಟ್ ಮಂಡಳಿ ಮತ್ತು ಮುಂಬೈ ಕ್ರಿಕೆಟ್ ಅಸೋಸಿಯೇಶನ್‌ಗೆ ಮನವಿ ಮಾಡಿದ್ದಾರೆ.

2013ರಲ್ಲಿ ಬಿಸಿಸಿಐ ಶಿಸ್ತು ಸಮಿತಿಯು ಐಪಿಎಲ್‌ನಲ್ಲಿ ಸ್ಪಾಟ್ ಫಿಕ್ಸಿಂಗ್ಸ್‌ನಲ್ಲಿ ಭಾಗಿಯಾಗಿದ್ದಾರೆಂಬ ಆರೋಪದಲ್ಲಿ ಶ್ರೀಶಾಂತ್, ಚವಾಣ್ ಮತ್ತು ಅಜಿತ್ ಚಾಂಡಿಲಾರಿಗೆ ಕ್ರಿಕೆಟ್‌ಗೆ ಜೀವಾವಧಿ ನಿಷೇಧವನ್ನು ಹೇರಿತ್ತು. ಆದರೆ 2015ರಲ್ಲಿ ದಿಲ್ಲಿ ವಿಚಾರಣಾ ನ್ಯಾಯಾಲಯವು ಈ ಆಟಗಾರರ ವಿರುದ್ಧದ ಎಲ್ಲಾ ಆರೋಪಗಳನ್ನು ಸಾಕ್ಷ್ಯಾಧಾರದ ಕೊರತೆಯಿಂದ ಕೈಬಿಟ್ಟಿತು.

‘‘ಜೀವಾವಧಿ ನಿಷೇಧವನ್ನು ಮರುಪರಿಶೀಲಿಸುವಂತೆ ನಾನು ಅವರನ್ನು ವಿನಂತಿಸಿದ್ದೇನೆ. ನಾನು ಮತ್ತೆ ಕ್ರಿಕೆಟ್ ಆಡಲು ಬಯಸುತ್ತೇನೆ. ನಾನು ಮತ್ತೆ ಕ್ರೀಡಾಂಗಣಕ್ಕೆ ಇಳಿಯಲು ಬಯಸುತ್ತೇನೆ. ಶ್ರೀಶಾಂತ್ ತಮ್ಮ ಪ್ರಕರಣವನ್ನು ಯಶಸ್ವಿಯಾಗಿ ಪ್ರಶ್ನಿಸಿದ್ದಾರೆ. ಅವರು ಮತ್ತೆ ಕ್ರಿಕೆಟ್ ಆಡಲಿದ್ದಾರೆ. ನಾನು ಅದೇ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇನೆ ಮತ್ತು ನನ್ನ ನಿಷೇಧವನ್ನು ಸಹ ಮರುಪರಿಶೀಲಿಸಬಹುದೆಂದು ಭಾವಿಸುತ್ತೇನೆ. ನನ್ನ ವಿಚಾರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ತವರಿನ ಕ್ರಿಕೆಟ್ ಸಂಸ್ಥೆ ಎಂಸಿಎಗೆ ವಿನಂತಿಸಿದ್ದೇನೆ ’’ಎಂದು 34ರ ಹರೆಯದ ಎಡಗೈ ಸ್ಪಿನ್ನರ್ ಚವಾಣ್ ಹೇಳಿದ್ದಾರೆ. ನಿಷೇಧಕ್ಕೊಳಗಾದ ಮೂವರು ಆಟಗಾರರ ಪೈಕಿ ಶ್ರೀಶಾಂತ್ ಒಬ್ಬರೇ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. 2019ರಲ್ಲಿ ಸುಪ್ರೀಂ ಕೋರ್ಟ್ ಶ್ರೀಶಾಂತ್ ವಿರುದ್ಧ ವಿಧಿಸಲಾದ ಜೀವಾವಧಿ ನಿಷೇಧವನ್ನು ರದ್ದುಪಡಿಸಿತು ಮತ್ತು ಶಿಕ್ಷೆಯ ಪ್ರಮಾಣವನ್ನು ಮರುಪರಿಶೀಲಿಸುವಂತೆ ಮಂಡಳಿಗೆ ಸೂಚಿಸಿತು. ಮಂಡಳಿಯು ಶ್ರೀಶಾಂತ್‌ಗೆ 2020ರ ಕ್ರೀಡಾ ಋತುವಿನಿಂದ ಕ್ರಿಕೆಟ್ ಆಡಲು ಅವಕಾಶ ನೀಡಿತು. ‘‘2015ರಲ್ಲಿ, ನನಗೆ ಕ್ಲೀನ್ ಚಿಟ್ ಸಿಕ್ಕಿತು . ದಿಲ್ಲಿ ನ್ಯಾಯಾಲಯವು ಎಲ್ಲಾ ಆರೋಪಗಳನ್ನು ಕೈಬಿಟ್ಟಿತು. ಆದರೆ ನಿಷೇಧ ಇನ್ನೂ ಇದೆ. ಕ್ರೀಡಾಂಗಣಕ್ಕೆ ವಾಪಸಾಗದೆ ನಾನು ಹತಾಶನಾಗಿದ್ದೇನೆ ಮತ್ತು ಅದಕ್ಕಾಗಿಯೇ ನಾನು ಮಂಡಳಿ ಮತ್ತು ಎಂಸಿಎಗೆ ವಿನಂತಿಯನ್ನು ಮಾಡಿದ್ದೇನೆ ಎಂದು ಅವರು ಹೇಳಿದರು. 2012ರಲ್ಲಿ ಪಂಜಾಬ್ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಇನಿಂಗ್ಸ್‌ನಲ್ಲಿ 9 ವಿಕೆಟ್ ಪಡೆಯುವ ಮೂಲಕ ಚವಾಣ್ ಗಮನ ಸೆಳೆದಿದ್ದರು. ಎಂಸಿಎ ಕಾರ್ಯದರ್ಶಿ ಸಂಜಯ್ ನಾಯಕ್ ಅವರು ಚವಾಣ್ ಅವರ ಅರ್ಜಿಯನ್ನು ಸ್ವೀಕರಿಸಿದ್ದಾರೆ ಮತ್ತು ಈ ವಿಷಯವನ್ನು ಅಪೆಕ್ಸ್ ಕೌನ್ಸಿಲ್‌ನಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News