ಭಾರತದ ಮಾಜಿ ಫುಟ್ಬಾಲ್ ಆಟಗಾರ ಹಕೀಮ್‌ಗೆ ಕೊರೋನ ಸೋಂಕು

Update: 2020-07-16 05:38 GMT

ಹೈದರಾಬಾದ್: ಖ್ಯಾತ ಫುಟ್ಬಾಲ್ ಆಟಗಾರ ಮತ್ತು ಧ್ಯಾನ್ ಚಂದ್ ಪ್ರಶಸ್ತಿ ಪುರಸ್ಕೃತ ಸೈಯದ್ ಶಾಹಿದ್ ಹಕೀಮ್ ಅವರಿಗೆ ಕೊರೋನ ಸೋಂಕು ತಗಲಿರುವುದು ದೃಢಪಟ್ಟಿದ್ದು, ಪ್ರಸ್ತುತ ಹೈದರಾಬಾದ್‌ನ ಸಂಪರ್ಕತಡೆ (ಕ್ವಾರಂಟೈನ್) ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 1960ರಲ್ಲಿ ರೋಮ್ ಒಲಿಂಪಿಕ್ಸ್‌ನಲ್ಲಿ ಭಾರತ ತಂಡದ ಸದಸ್ಯರಾಗಿದ್ದ 81ರ ಹರೆಯದ ಹಕೀಮ್ ಬುಧವಾರ ಈ ಬೆಳವಣಿಗೆಯನ್ನು ದೃಢ ಪಡಿಸಿದ್ದಾರೆ. ‘‘ನಾನು ಆರು ದಿನಗಳ ಹಿಂದೆ ಕೋವಿಡ್ -19 ಪಾಸಿಟಿವ್ ಪರೀಕ್ಷೆಗೊಳಗಾಗಿದ್ದೇನೆ. ಮತ್ತು ನಾನು ಇದೀಗ ಹೈದರಾಬಾದ್‌ನ ಹೊಟೇಲ್‌ನಲ್ಲಿದ್ದೇನೆ. ಇದನ್ನು ರಾಜ್ಯ ಸರಕಾರವು ಕ್ವಾರಂಟೈನ್ ಕೇಂದ್ರವಾಗಿ ಪರಿವರ್ತಿಸಿದೆ ’’ ಎಂದು ಹಕೀಮ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದರು.

 ‘‘ಕಳೆದ ಎರಡು ದಿನಗಳಲ್ಲಿ ನನ್ನ ಆರೋಗ್ಯದಲ್ಲಿ ಸುಧಾರಣೆಯನ್ನು ನಾನು ಗ್ರಹಿಸಬಲ್ಲೆ ಮತ್ತು ಶೀಘ್ರದಲ್ಲೇ ಚೇತರಿಸಿಕೊಂಡು ಮನೆಗೆ ಹಿಂತಿರುಗುವೆ’’ಎಂಬ ವಿಶ್ವಾಸ ವ್ಯಕ್ತಪಡಿಸಿದರು.

 ಕರ್ನಾಟಕದ ಗುಲ್ಬರ್ಗಕ್ಕೆ ಭೇಟಿ ನೀಡಿದ ನಂತರ ಅನಾರೋಗ್ಯಕ್ಕೆ ಒಳಗಾಗಿದ್ದೇನೆ ಎಂದು ಹಕೀಮ್ ಹೇಳಿದ್ದಾರೆ. ‘‘ಗುಲ್ಬರ್ಗಾಗೆ ಭೇಟಿ ನೀಡಿದ ನಂತರ ನನಗೆ ಜ್ವರ ಬರುತ್ತಿತ್ತು ಮತ್ತು ನಾನು ಜ್ವರಕ್ಕೆ ಔಷಧಿ ತೆಗೆದುಕೊಳ್ಳುತ್ತಿದ್ದೆ. ನಂತರ, ನನ್ನ ಎದೆಯ ಎಕ್ಸ್-ರೇತೆಗೆಯಲಾಯಿತು.ನನಗೆ ನ್ಯುಮೋನಿಯಾ ಇದೆ ಎಂದು ತಿಳಿಯಿತು. ಆರು  ದಿನಗಳ ಹಿಂದೆ ಕೋವಿಡ್-19 ಪರೀಕ್ಷೆಗೆ ಒಳಗಾದೆ. ಫಲಿತಾಂಶವು ಪಾಸಿಟಿವ್ ಆಗಿ ಕಂಡು ಬಂತು ’’ ಎಂದು ಹೇಳಿದರು.

ಹಕೀಮ್ ಅವರಿಗೆ 2017ರಲ್ಲಿ ಧ್ಯಾನ್ ಚಂದ್ ಪ್ರಶಸ್ತಿಯನ್ನು ನೀಡಲಾಯಿತು. ಫುಟ್ಬಾಲ್ ವೃತ್ತಿಜೀವನದ ನಂತರ ಹಕೀಮ್ 1989ರವರೆಗೆ ಖತರ್‌ನಲ್ಲಿ ನಡೆದ ಎಎಫ್‌ಸಿ ಏಶ್ಯನ್‌ಕಪ್ ಸೇರಿದಂತೆ 1989ರವರೆಗೆ ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ ರೆಫರಿ ಆಗಿ ಕಾರ್ಯನಿರ್ವಹಿಸಿದ್ದರು. ಅನಂತರ ಅವರು ತನ್ನ ತಂದೆ ಮತ್ತು ಭಾರತದ ಶ್ರೇಷ್ಠ ಫುಟ್ಬಾಲ್ ಕೋಚ್ ಸೈಯದ್ ಅಬ್ದುಲ್ ರಹೀಮ್ ಹಾದಿಯಲ್ಲಿ ಸಾಗಿ ಕೋಚಿಂಗ್ ವೃತ್ತಿಯನ್ನು ಕೈಗೆತ್ತಿಕೊಂಡರು. ಹಕೀಮ್ ಭಾರತದ ಕ್ರೀಡಾ ಪ್ರಾಧಿಕಾರದಲ್ಲಿ ಮುಖ್ಯ ಯೋಜನಾ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News