ಖೇಲ್ ರತ್ನ ನಾಮ ನಿರ್ದೇಶನವನ್ನು ಹಿಂಪಡೆಯಲು ನಾನೇ ಕೇಳಿದ್ದೆ: ಭಜ್ಜಿ

Update: 2020-07-19 07:49 GMT

ಹೊಸದಿಲ್ಲಿ: ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ನಾಮಪತ್ರ ಹಿಂತೆಗೆದುಕೊಳ್ಳುವಂತೆ ತಾನು ಪಂಜಾಬ್ ಸರಕಾರವನ್ನು ಕೇಳಿರುವುದಾಗಿ ಭಾರತ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಶನಿವಾರ ಹೇಳಿದ್ದಾರೆ.

ಸರಣಿ ಟ್ವೀಟ್‌ಗಳಲ್ಲಿ ತಾನು ಖೇಲ್ ರತ್ನ ಪ್ರಶಸ್ತಿಗೆ ಅರ್ಹನಲ್ಲ, ಇದು ದೇಶದ ಅತ್ಯುನ್ನತ ಕ್ರೀಡಾ ಗೌರವವಾಗಿದೆ ಎಂದು ಹೇಳಿದ್ದಾರೆ .ಇದಕ್ಕೆ ಅವರು ಸ್ಪಷ್ಟನೆ ನೀಡಿದ್ದಾರೆ.

 ‘‘ಆತ್ಮೀಯ ಗೆಳೆಯರೇ, ಖೇಲ್ ರತ್ನ ನಾಮನಿರ್ದೇಶ ನಗಳಿಂದ ಪಂಜಾಬ್ ಸರಕಾರ ನನ್ನ ಹೆಸರನ್ನು ಏಕೆ ಹಿಂತೆಗೆದು ಕೊಂಡಿತು ಎಂಬ ವಿಚಾರದಲ್ಲಿ ನನಗೆ ಅನೇಕ ಕರೆಗಳು ಬಂದಿವೆ. ವಾಸ್ತವ ಏನೆಂದರೆ ನಾನು ಖೇಲ್ ರತ್ನಕ್ಕೆ ಅರ್ಹನಲ್ಲ, ಅದು ಕಳೆದ ಮೂರು ವರ್ಷಗಳಲ್ಲಿ ಅಂತರ್‌ರಾಷ್ಟ್ರೀಯ ಪ್ರದರ್ಶನಗಳನ್ನು ಮುಖ್ಯವಾಗಿ ಪರಿಗಣಿಸುತ್ತದೆ.

    ಪಂಜಾಬ್ ಸರಕಾರ ನನ್ನ ಹೆಸರನ್ನು ಹಿಂಪಡೆ ದಿರುವುದು ಸರಿಯಾದ ನಿರ್ಧಾರ. ಇದರಲ್ಲಿ ಸರಕಾರದ ತಪ್ಪಿಲ್ಲ. ಇದನ್ನು ತಪ್ಪಾಗಿ ಅರ್ಥೈಸಿಕೊಳ್ಳದಂತೆ ಮಾಧ್ಯಮ, ನನ್ನ ಸ್ನೇಹಿತರನ್ನು ಒತ್ತಾಯಿಸುತ್ತೇನೆ ’’ ಎಂದು ಅವರು ಟ್ವೀಟ್ ಮಾಡಿದ್ದಾರೆ.

  ‘‘ಖೇಲ್ ರತ್ನಕ್ಕೆ ನಾಮನಿರ್ದೇಶನ ಮಾಡುವ ಬಗ್ಗೆ ಸಾಕಷ್ಟು ಗೊಂದಲಗಳು ಮತ್ತು ಉಹಾಪೋಹಗಳು ಹರಡಿದ್ದರಿಂದ ಇದಕ್ಕೆ ನಾನು ಸ್ಪಷ್ಟನೆ ನೀಡುತ್ತಿದ್ದೇನೆ. ಕಳೆದ ವರ್ಷ ನಾಮನಿರ್ದೇಶನವನ್ನು ತಡವಾಗಿ ಕಳುಹಿಸಲಾಗಿತ್ತು.ಆದರೆ ಈ ವರ್ಷ ನಾನು ಪಂಜಾಬ್ ಸರಕಾರಕ್ಕೆ ನನ್ನ ನಾಮನಿರ್ದೇಶನವನ್ನು ಹಿಂತೆಗೆದುಕೊಳ್ಳುವಂತೆ ಕೇಳಿದ್ದೆೆ. ಏಕೆಂದರೆ 3 ವರ್ಷಗಳ ಅರ್ಹತಾ ಮಾನದಂಡಗಳ ಅಡಿಯಲ್ಲಿ ನಾನು ಪ್ರಶಸ್ತಿಗೆ ಅರ್ಹನಲ್ಲ. ಇದರ ಬಗ್ಗೆ ಮತ್ತಷ್ಟು ವದಂತಿ ಹಬ್ಬಿಸುವುದು ಬೇಡ’’ ಎಂದು ಕಿವಿ ಮಾತು ಹೇಳಿದ್ದಾರೆ.

ಕ್ರೀಡಾ ಸಚಿವಾಲಯವು ತನ್ನ ದಾಖಲೆಯಲ್ಲಿ ಖೇಲ್ ರತ್ನಕ್ಕೆ ನಾಮನಿರ್ದೇಶನಗೊಳ್ಳುವ ಅರ್ಹತೆಯನ್ನು ವಿವರಿಸುತ್ತದೆ. ಕ್ರೀಡಾ ಕ್ಷೇತ್ರದಲ್ಲಿ ಅದ್ಭುತ ಮತ್ತು ಮಹೋನ್ನತ ಪ್ರದರ್ಶನಗಳು ಕ್ರೀಡಾಪಟುವಿನಿಂದ ನಾಲ್ಕು ವರ್ಷಗಳ ಅವಧಿಯಲ್ಲಿ ಇರಬೇಕು. ಪಂಜಾಬ್ ಸರಕಾರವು ಕ್ರೀಡಾ ಸಚಿವಾಲಯಕ್ಕೆ ದಾಖಲೆಗಳನ್ನು ಕಳುಹಿಸಿದ ನಂತರ ಕಳೆದ ವರ್ಷ ಹರ್ಭಜನ್ ಅವರ ನಾಮನಿರ್ದೇಶನವನ್ನು ತಿರಸ್ಕರಿಸಲಾಯಿತು. ಆದಾಗ್ಯೂ, ಈ ವರ್ಷ ನಾಮನಿರ್ದೇಶನವನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸಲಾಯಿತು. ಬಳಿಕ ರಾಜ್ಯ ಸರಕಾರವು ಅದನ್ನು ಯಾವುದೇ ವಿವರಣೆಯಿಲ್ಲದೆ ಹಿಂದಕ್ಕೆ ಪಡೆಯಿತು. 2007ರ ಟ್ವೆಂಟಿ-20 ವಿಶ್ವಕಪ್ ಮತ್ತು 2011ರ ವಿಶ್ವಕಪ್ ಗೆದ್ದ ಭಾರತದ ತಂಡಗಳಲ್ಲಿ ಹರ್ಭಜನ್ ಸದಸ್ಯರಾಗಿದ್ದರು. ಅನಿಲ್ ಕುಂಬ್ಳೆ (619) ಮತ್ತು ಕಪಿಲ್ ದೇವ್ (434) ನಂತರ ಹರ್ಭಜನ್ ಸಿಂಗ್ (417) ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ಮೂರನೇ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News