ಮಾನವಹಕ್ಕುಗಳ ಹೋರಾಟಗಾರನ ನಿಧನಕ್ಕೆ ಭಾರತೀಯ ಸಮುದಾಯ ಸಂತಾಪ
ವಾಶಿಂಗ್ಟನ್, ಜು. 20: ಅಮೆರಿಕದ ನಾಗರಿಕ ಹಕ್ಕುಗಳ ಹೋರಾಟಗಾರ ಜಾನ್ ಲೂಯಿಸ್‌ರ ಸಾವಿಗೆ ಭಾರತೀಯ-ಅಮೆರಿಕನ್ ಸಮುದಾಯ ಸಂತಾಪ ವ್ಯಕ್ತಪಡಿಸಿದೆ. ಅಮೆರಿಕ ಸಂಸತ್ತಿನ ಘಟಕವಾಗಿರುವ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಸದಸ್ಯರಾಗಿ, ಸದನದಲ್ಲಿ ಭಾರತ ಮತ್ತು ಮಹಾತ್ಮಾ ಗಾಂಧೀಜಿಗೆ ಸಂಬಂಧಿಸಿದ ಹಲವಾರು ಮಸೂದೆಗಳು ಅಂಗೀಕಾರಗೊಳ್ಳುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
1987ರಿಂದ ಮರಣದವರೆಗೂ ಅವರು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಜಾರ್ಜಿಯ ರಾಜ್ಯದ 5ನೇ ಸಂಸದೀಯ ಜಿಲ್ಲೆಯನ್ನು ಪ್ರತಿನಿಧಿಸಿದ್ದರು. ಅವರು ಜುಲೈ 17ರಂದು ತನ್ನ 80ರ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ಅವರು ಭಾರತದ ನೈಜ ಮಿತ್ರನಾಗಿದ್ದರು ಹಾಗೂ ಗಾಂಧೀಜಿ ಮತ್ತು ಶಾಂತಿಯಲ್ಲಿ ಅಚಲ ನಂಬಿಕೆಯನ್ನು ಹೊಂದಿದ್ದರು ಎಂದು ಭಾರತೀಯ ಅಮೆರಿಕನ್ ಸಮುದಾಯ ಬಣ್ಣಿಸಿದೆ.
ಅಮೆರಿಕಕ್ಕೆ ಭಾರತದ ರಾಯಭಾರಿ ತರಣ್‌ಜಿತ್ ಸಿಂಗ್ ಸಂಧು, ಜಾನ್ ಲೂಯಿಸ್‌ರನ್ನು ಭಾರತದ ನೈಜ ಮಿತ್ರ ಎಂಬುದಾಗಿ ಬಣ್ಣಿಸಿದ್ದಾರೆ.
ಜಾನ್ ಲೂಯಿಸ್ ಸಾವಿಗೆ ಭಾರತ ಮೂಲದ ಸೆನೆಟರ್ ಕಮಲಾ ಹ್ಯಾರಿಸ್ ಕಂಬನಿ ಮಿಡಿದಿದ್ದಾರೆ.