ಭಾರತದ ಆಹಾರ ಭದ್ರತೆಗೆ ಮಿಡತೆ ದಾಳಿಗಳಿಂದ ಗಂಭೀರ ಬೆದರಿಕೆ: ವಿಶ್ವಸಂಸ್ಥೆ ಎಚ್ಚರಿಕೆ

Update: 2020-07-21 18:00 GMT

ವಿಶ್ವಸಂಸ್ಥೆ, ಜು. 21: ಮಿಡತೆ ದಾಳಿಗಳು ಪೂರ್ವ ಆಫ್ರಿಕದ ಕೆಲವು ಭಾಗಗಳು, ಭಾರತ ಮತ್ತು ಪಾಕಿಸ್ತಾನಗಳ ಆಹಾರ ಭದ್ರತೆಗೆ ಗಂಭೀರ ಬೆದರಿಕೆಯನ್ನು ಒಡ್ಡಿವೆ ಎಂದು ವಿಶ್ವಸಂಸ್ಥೆಯ ಘಟಕವಾಗಿರುವ ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಮ್‌ಒ) ಎಚ್ಚರಿಸಿದೆ. ಮಿಡತೆ ದಾಳಿಗಳು ಬದಲಾಗುತ್ತಿರುವ ಜಾಗತಿಕ ಹವಾಮಾನದ ಫಲಿತಾಂಶವಾಗಿದ್ದು, ಮಾನವ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮಗಳನ್ನು ಬೀರಲಿವೆ ಎಂದು ಅದು ಹೇಳಿದೆ.

ಮರಳುಗಾಡು ಪ್ರದೇಶಗಳಲ್ಲಿನ ತಾಪಮಾನ ಮತ್ತು ಮಳೆ ಪ್ರಮಾಣದಲ್ಲಿನ ಏರಿಕೆಗಳು ಹಾಗೂ ಚಂಡಮಾರುತದೊಂದಿಗೆ ಬರುವ ಬಲವಾದ ಗಾಳಿಯು ಕೀಟಗಳ ಸಂತಾನಾಭಿವೃದ್ಧಿ, ಬೆಳವಣಿಗೆ ಮತ್ತು ವಲಸೆಗೆ ಹೊಸ ಪೂರಕ ವಾತಾವರಣವನ್ನು ಒದಗಿಸುತ್ತಿವೆ ಎಂದು ವಿಶ್ವ ಹವಾಮಾನ ಸಂಸ್ಥೆ ತಿಳಿಸಿದೆ.

ಬೆಳೆಗಳನ್ನು ಕಬಳಿಸುವ ಈ ದೊಡ್ಡ ಗಾತ್ರದ ಹಾಗೂ ಆಕ್ರಮಣಕಾರಿ ಕೀಟಗಳ ದಂಡುಗಳು ಇತ್ತೀಚೆಗೆ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಗುಜರಾತ್ ರಾಜ್ಯಗಳ ಮರುಭೂಮಿ ಪ್ರದೇಶಗಳ ಹತ್ತಕ್ಕೂ ಅಧಿಕ ಜಿಲ್ಲೆಗಳಿಗೆ ದಾಳಿ ಮಾಡಿದ್ದವು.

ಮಿಡತೆಗಳ ಭೀಕರ ದಾಳಿಗೆ ಒಳಗಾಗಿರುವ ಪಾಕಿಸ್ತಾನವು ಈ ವರ್ಷದ ಫೆಬ್ರವರಿಯಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿತ್ತು.

ಪದೇ ಪದೇ ಹವಾಮಾನ ವೈಪರೀತ್ಯಗಳು ಕಾರಣ

ಮರುಭೂಮಿಗಳ ಮಿಡತೆಗಳು ಭೂಮಿಯ ಮೇಲೆ ಪ್ರಾಚೀನ ಕಾಲದಿಂದಲೇ ಇದ್ದರೂ, ಇತ್ತೀಚಿಗೆ ಅವುಗಳ ಸಂಖ್ಯೆಯಲ್ಲಿ ಆಗಿರುವ ಅಗಾಧ ಹೆಚ್ಚಳಕ್ಕೆ ಹವಾಮಾನ ಬದಲಾವಣೆ ಹಾಗೂ ಹವಾಮಾನ ವೈಪರೀತ್ಯಗಳು ಪದೇ ಪದೇ ಸಂಭವಿಸುತ್ತಿರುವುದೇ ಕಾರಣ ಎಂದು ‘ನೇಚರ್ ಕ್ಲೈಮೇಟ್ ಚೇಂಜ್’ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ಲೇಖನವೊಂದರಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News