ಒಮ್ಮೆ ಕೊರೋನದಿಂದ ಚೇತರಿಸಿದರೆ ಮತ್ತೆ ಕೊರೋನ ಸೋಂಕಿಗೆ ಒಳಗಾಗುವುದಿಲ್ಲ ಎಂದು ಹೇಳಲಾಗದು: ಸಂಶೋಧನಾ ವರದಿ

Update: 2020-07-22 17:19 GMT

ನ್ಯೂಯಾರ್ಕ್, ಜು. 22: ಸೌಮ್ಯ ಕೊರೋನ ವೈರಸ್‌ನ ಲಕ್ಷಣಗಳಿಂದ ಒಮ್ಮೆ ಚೇತರಿಸಿಕೊಂಡರೆ, ಮುಂದೆಂದೂ ಕೊರೋನ ವೈರಸ್ ಸೋಂಕಿಗೆ ಒಳಗಾಗದಂತೆ ಅದು ರಕ್ಷಣೆ ನೀಡಲಾರದು ಎಂದು ವರದಿಯೊಂದು ಎಚ್ಚರಿಸಿದೆ. ಹಾಗಾಗಿ, ಸಮುದಾಯ ರೋಗನಿರೋಧಕ ಶಕ್ತಿ ಮತ್ತು ಲಸಿಕೆಗಳ ಬಾಳಿಕೆ ಬಗ್ಗೆ ಎಚ್ಚರಿಕೆಯಿಂದ ಇರಬೇಕಾದ ಅಗತ್ಯವಿದೆ ಎಂದು ಅದು ಹೇಳಿದೆ.

ಆಸ್ಪತ್ರೆಗಳ ತುರ್ತು ನಿಗಾ ವಿಭಾಗದಲ್ಲಿ ಚಿಕಿತ್ಸೆಯ ಅಗತ್ಯವಿರದ, ಸೌಮ್ಯ ಲಕ್ಷಣಗಳನ್ನು ಹೊಂದಿದ್ದ 34 ಕೊರೋನ ವೈರಸ್ ರೋಗಿಗಳಿಂದ ಪಡೆದ ರಕ್ತದಲ್ಲಿರುವ ಪ್ರತಿಕಾಯಗಳ ಬಗ್ಗೆ ನಡೆದ ಸಂಶೋಧನೆಯ ವಿವರಗಳನ್ನು ‘ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್’ ಪ್ರಕಟಿಸಿದೆ. ಈ 34 ಮಂದಿಯ ಪೈಕಿ ಕೇವಲ ಇಬ್ಬರಿಗೆ ಕೃತಕ ಆಮ್ಲಜನಕ ನೀಡಲಾಗಿತ್ತು ಹಾಗೂ ಅವರಿಗೆ ಎಚ್‌ಐವಿ ಔಷಧ ನೀಡಲಾಗಿತ್ತು. ಅವರ ಪೈಕಿ ಯಾರನ್ನೂ ಕೃತಕ ಶ್ವಾಸದ ಯಂತ್ರದಲ್ಲಿ ಇರಿಸಲಾಗಿಲ್ಲ ಹಾಗೂ ಅವರಿಗೆ ರೆಮ್‌ಡೆಸಿವಿರ್ ಔಷಧಿಯನ್ನು ನೀಡಲಾಗಿಲ್ಲ.

ಮೊದಲ ವಿಶ್ಲೇಷಣೆಯನ್ನು ಕೊರೋನ ವೈರಸ್ ಲಕ್ಷಣಗಳು ಕಾಣಿಸಿಕೊಂಡ ಸರಾಸರಿ 37 ದಿನಗಳ ಬಳಿಕ ಪಡೆಯಲಾದ ಪ್ರತಿಕಾಯಗಳ ಬಗ್ಗೆ ನಡೆಸಲಾಯಿತು ಹಾಗೂ ಎರಡನೇ ವಿಶ್ಲೇಷಣೆಯನ್ನು ಸುಮಾರು 86 ದಿನಗಳ ಬಳಿಕ ಪಡೆಯಲಾದ ಪ್ರತಿಕಾಯಗಳ ಬಗ್ಗೆ ನಡೆಸಲಾಯಿತು. ಈ ಅವಧಿಯಲ್ಲಿ ಪ್ರತಿಕಾಯಗಳ ಮಟ್ಟದಲ್ಲಿ ಇಳಿಕೆಯಾಗಿರುವುದನ್ನು ಸಂಶೋಧಕರು ಪತ್ತೆಹಚ್ಚಿದರು. ಆರಂಭಿಕ ಮಾದರಿಯ ಕೊರೋನ ವೈರಸ್‌ನಿಂದಾಗಿ ಉಂಟಾಗುವ ಸಾರ್ಸ್‌ಗೆ ಹೋಲಿಸಿದರೆ, ಕೋವಿಡ್-19ರಲ್ಲಿ ರಕ್ತದಲ್ಲಿರುವ ಪ್ರತಿಕಾಯಗಳು ಬೇಗನೇ ನಾಶವಾಗುತ್ತವೆ ಎನ್ನುವುದೂ ಪ್ರಯೋಗದಿಂದ ಬಹಿರಂಗಗೊಂಡಿತು.

‘‘ಕೊರೋನ ವೈರಸ್ ರೋಗ ನಿರೋಧಕ ಶಕ್ತಿಯು ಎಷ್ಟು ದಿನ ಇರುತ್ತದೆ ಹಾಗೂ 90 ದಿನಗಳ ಬಳಿಕ ಪ್ರತಿಕಾಯಗಳು ನಾಶವಾಗುವ ದರವನ್ನು ನಿಗದಿಪಡಿಸಲು ಹೆಚ್ಚಿನ ಅಧ್ಯಯನಗಳ ಅಗತ್ಯವಿದೆ’’ ಎಂದು ಲಾಸ್ ಏಂಜಲಿಸ್‌ನಲ್ಲಿರುವ ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯ ಡೇವಿಡ್ ಜೆಫನ್ ಸ್ಕೂಲ್ ಆಫ್ ಮೆಡಿಸಿನ್‌ನ ಎಫ್. ಜೇವಿಯರ್ ಇಬರೊಂಡೊ ನೇತೃತ್ವದ ಸಂಶೋಧಕರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News