ಈ ಬಾರಿ ವಿಶ್ವಸಂಸ್ಥೆಯ ಅಶರೀರ ಮಹಾಧಿವೇಶನ: ಕೊರೋನ ಬೆದರಿಕೆ; 75 ವರ್ಷಗಳ ಇತಿಹಾಸದಲ್ಲೇ ಮೊದಲು!

Update: 2020-07-23 14:56 GMT
ಫೈಲ್ ಚಿತ್ರ

ವಿಶ್ವಸಂಸ್ಥೆ (ನ್ಯೂಯಾರ್ಕ್), ಜು. 23: ಸೆಪ್ಟಂಬರ್‌ನಲ್ಲಿ ನಡೆಯಲಿರುವ ಈ ಬಾರಿಯ ವಿಶ್ವಸಂಸ್ಥೆಯ ಮಹಾಧಿವೇಶನವನ್ನು ಕೊರೋನ ವೈರಸ್ ಸಾಂಕ್ರಾಮಿಕದ ಬೆದರಿಕೆಯ ಹಿನ್ನೆಲೆಯಲ್ಲಿ ಅಶರೀರ (ವರ್ಚುವಲ್)ವಾಗಿ ನಡೆಸಲು 193 ಸದಸ್ಯರ ಜಾಗತಿಕ ಸಂಘಟನೆಯು ನಿರ್ಧರಿಸಿದೆ.

ರಾಷ್ಟ್ರಗಳ ಮುಖ್ಯಸ್ಥರು ತಮ್ಮ ಪೂರ್ವದಾಖಲಿತ ವೀಡಿಯೊ ಭಾಷಣಗಳನ್ನು ವಿಶ್ವಸಂಸ್ಥೆಗೆ ಸಲ್ಲಿಸಲಿದ್ದಾರೆ. ವಿಶ್ವಸಂಸ್ಥೆಯ ಮಹಾಧಿವೇಶನವು ಜಾಗತಿಕ ನಾಯಕರ ಉಪಸ್ಥಿತಿಯಿರದೆ ನಡೆಯುವುದು ಅದರ 75 ವರ್ಷಗಳ ಇತಿಹಾಸದಲ್ಲೇ ಇದು ಮೊದಲ ಬಾರಿಯಾಗಲಿದೆ.

ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯ ಮಹತ್ವದ 75ನೇ ಅಧಿವೇಶನವು ಸೆಪ್ಟಂಬರ್ 15ರಂದು ಆರಂಭಗೊಳ್ಳಲಿದೆ.

‘’ಪ್ರತಿ ಸದಸ್ಯ ದೇಶ, ವೀಕ್ಷಕ ದೇಶ ಮತ್ತು ಐರೋಪ್ಯ ಒಕ್ಕೂಟವು ದೇಶದ ಮುಖ್ಯಸ್ಥರು, ಉಪಾಧ್ಯಕ್ಷರು, ಯುವರಾಜ ಅಥವಾ ಯುವರಾಣಿ, ಸರಕಾರದ ಮುಖ್ಯಸ್ಥರು, ಸಚಿವರು ಅಥವಾ ಉಪಸಚಿವರ ಪೂರ್ವ ಮುದ್ರಿತ ಭಾಷಣಗಳನ್ನು ಸಲ್ಲಿಸಬಹುದಾಗಿದೆ. ಅಸೆಂಬ್ಲಿ ಕೋಣೆಯಲ್ಲಿ ಸಶರೀರವಾಗಿ ಉಪಸ್ಥಿತರಿರುವ ಸರಕಾರಗಳ ಮುಖ್ಯಸ್ಥರ ಪ್ರತಿನಿಧಿಗಳ ಪ್ರಾಸ್ತಾವಿಕ ಮಾತುಗಳ ಬಳಿಕ, ಅವುಗಳನ್ನು ಜನರಲ್ ಅಸೆಂಬ್ಲಿಯ 75ನೇ ಅಧಿವೇಶನದ ಚರ್ಚೆಯ ವೇಳೆ ಜನರಲ್ ಅಸೆಂಬ್ಲಿ ಕೋಣೆಯಲ್ಲಿ ಪ್ರದರ್ಶಿಸಲಾಗುವುದು’’ ಎಂಬ ನಿರ್ಣಯವನ್ನು ಜನರಲ್ ಅಸೆಂಬ್ಲಿ ಬುಧವಾರ ಅಂಗೀಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News