×
Ad

ಹೈದರಾಬಾದ್ ನಿಝಾಮರ ಹಣಕ್ಕಾಗಿ ಮತ್ತೆ ಲಂಡನ್ ಕೋರ್ಟ್ ಮೆಟ್ಟಿಲೇರಿದ ವಂಶಸ್ಥರು

Update: 2020-07-23 21:13 IST
ಫೈಲ್ ಚಿತ್ರ

ಲಂಡನ್, ಜು. 23: ಬ್ರಿಟನ್‌ನ ಬ್ಯಾಂಕ್ ಖಾತೆಯೊಂದರಲ್ಲಿರುವ ಹೈದರಾಬಾದ್ ನಿಝಾಮರ 35 ಮಿಲಿಯ ಪೌಂಡ್ (ಸುಮಾರು 333 ಕೋಟಿ ರೂಪಾಯಿ)ಗೂ ಅಧಿಕ ಹಣಕ್ಕೆ ಸಂಬಂಧಿಸಿ ನ್ಯಾಯಾಲಯವೊಂದು ನೀಡಿರುವ ಆದೇಶವನ್ನು ನಿಝಾಮರ ವಂಶಸ್ಥರು ಬುಧವಾರ ಲಂಡನ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

1947ರಲ್ಲಿ ಭಾರತ ವಿಭಜನೆಯಾಗುವಾಗ ಬ್ರಿಟನ್‌ ನ ಬ್ಯಾಂಕೊಂದರಲ್ಲಿ ಇಡಲಾಗಿದ್ದ ಹೈದರಾಬಾದ್‌ನ ಏಳನೇ ನಿಜಾಮರಿಗೆ ಸೇರಿದ ಹಣಕ್ಕೆ ಸಂಬಂಧಿಸಿದ ವಿವಾದ ಇದಾಗಿದೆ. ಈ ಹಣ ತಮಗೆ ಸೇರಿದ್ದು ಎಂಬುದಾಗಿ ಭಾರತ, ನಿಝಾಮ್ ಸಹೋದರರು ಮತ್ತು ಪಾಕಿಸ್ತಾನಗಳು ವಾದಿಸುತ್ತಾ ಬಂದಿವೆ.

ಈ ಪ್ರಕರಣಕ್ಕೆ ಸಂಬಂಧಿಸಿ ಕಳೆದ ವರ್ಷ ಲಂಡನ್‌ನ ರಾಯಲ್ ಕೋರ್ಟ್ಸ್ ಆಫ್ ಜಸ್ಟಿಸ್, ಭಾರತ ಸರಕಾರ ಹಾಗೂ ಹೈದರಾಬಾದ್‌ನ ಎಂಟನೇ ನಾಮಮಾತ್ರ ನಿಝಾಮ ಮತ್ತು ಅವರ ಸಹೋದರನ ಪರವಾಗಿ ತೀರ್ಪು ನೀಡಿತ್ತು. ನಿಝಾಮ್ ರ ಹಣದ ವಿಚಾರದಲ್ಲಿ ಪಾಕಿಸ್ತಾನದೊಂದಿಗೆ ದಶಕಗಳಿಂದ ಕಾನೂನು ಹೋರಾಟ ನಡೆದಿದೆ. ಈ ಹೋರಾಟದ ವೇಳೆ ಈ ನಿಝಾಮ್ ಸಹೋದರರು ತಮ್ಮ ನಡುವೆ ರಹಸ್ಯ ಒಪ್ಪಂದವೊಂದನ್ನು ಮಾಡಿಕೊಂಡಿದ್ದರು.

ಆದರೆ, ದಿವಂಗತ ಏಳನೇ ನಿಝಾಮರ 116 ಉತ್ತರಾಧಿಕಾರಿಗಳ ಪರವಾಗಿ ಇನ್ನೋರ್ವ ವಂಶಸ್ಥ ನಜಾಫ್ ಅಲಿ ಖಾನ್ ಕಳೆದ ವರ್ಷದ ತೀರ್ಪನ್ನು ಪ್ರಶ್ನಿಸಲು ಮುಂದಾಗಿದ್ದಾರೆ. ಏಳನೇ ನಿಝಾಮರ ಎಸ್ಟೇಟ್‌ನ ಆಡಳಿತಗಾರರು ‘ನಂಬಿಕೆ ದ್ರೋಹ’ ಮಾಡಿದ್ದಾರೆ ಎಂಬುದಾಗಿ ಅವರು ಆರೋಪಿಸಿದ್ದಾರೆ.

ಭಾರತದಿಂದಲೇ ವೀಡಿಯೊ ಲಿಂಕ್ ಮೂಲಕ ಲಂಡನ್ ಹೈಕೋರ್ಟ್‌ನಲ್ಲಿ ಹಾಜರಾದ ನಜಾಫ್ ಅಲಿ ಖಾನ್, ಭಾರತ ಮತ್ತು ಇಬ್ಬರು ರಾಜಕುಮಾರರಿಗೆ (ರಾಜಕುಮಾರ ಮುಕರ್ರಮ್ ಜಾ ಮತ್ತು ಅವರ ತಮ್ಮ ಮುಫಖಮ್ ಜಾ) ಅನುಚಿತವಾಗಿ ಹಣ ವಿತರಿಸಲಾಗಿದೆ ಎಂದು ಹೇಳಿದರು. ಅದೂ ಅಲ್ಲದೆ, ತಾವು ತೀವ್ರ ಹಣದ ಬಿಕ್ಕಟ್ಟು ಎದುರಿಸುತ್ತಿದ್ದೇವೆ ಎಂಬುದಾಗಿಯೂ ಹೇಳಿದರು.

‘‘2019ರ ನನ್ನ ತೀರ್ಪಿನಲ್ಲಿ ಆ ಹಣದ ಒಡೆಯರು ಯಾರು ಎಂಬುದನ್ನು ನಾನು ನಿರ್ಧರಿಸಿದ್ದೇನೆ. ಹಿಂದಿನ ಮೊಕದ್ದಮೆಯ ಕಲಾಪವನ್ನು ಮತ್ತೆ ಆರಂಭಿಸಬಹುದು ಎನ್ನುವುದನ್ನು ಸ್ವೀಕರಿಸಲು ಅಸಾಧ್ಯ’’ ಎಂದು ಪ್ರಕರಣವನ್ನು ಪುನರಾರಂಭಿಸುವ ನಜಾಫ್ ಅಲಿ ಖಾನ್‌ರ ಪ್ರಯತ್ನವನ್ನು ತಿರಸ್ಕರಿಸುತ್ತಾ ಹೇಳಿದರು.

ಆದರೂ, ದಿವಂಗತ ಏಳನೇ ನಿಝಾಮರ ಎಸ್ಟೇಟ್‌ನ ಆಡಳಿತಾಧಿಕಾರಿಯು ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪಗಳಿಗೆ ಸಂಬಂಧಿಸಿದ ವಾದಗಳನ್ನು ಆಲಿಸುವುದನ್ನು ಮುಂದುವರಿಸಲು ನ್ಯಾಯಾಧೀಶರು ತೀರ್ಮಾನಿಸಿದರು.

ಪಾಕ್ ಹೈಕಮಿಶನರ್ ಕಚೇರಿಗೆ ಸಾಗಿಸಲಾದ ಹಣ

1947ರಲ್ಲಿ ಅಂದಿನ ಹೈದರಾಬಾದ್ ನಿಝಾಮರಿಗೆ ಸೇರಿದ 10,07,940 ಪೌಂಡ್ ಮತ್ತು 9 ಶಿಲಿಂಗ್ ಹಣವನ್ನು ಹೊಸದಾಗಿ ರಚನೆಯಾದ ಪಾಕಿಸ್ತಾನ ದೇಶದ ಬ್ರಿಟನ್‌ನಲ್ಲಿರುವ ಹೈಕಮಿಶನರ್ ಕಚೇರಿಗೆ ವರ್ಗಾಯಿಸಲಾಗಿತ್ತು. ಲಂಡನ್‌ನ ಬ್ಯಾಂಕ್ ಖಾತೆಯೊಂದರಲ್ಲಿದ್ದ ಆ ಹಣ ಈಗ ಬೆಳೆದು ಸುಮಾರು 35 ಮಿಲಿಯ ಪೌಂಡ್ ಆಗಿದೆ.

ಆ ಹಣ ತಮಗೆ ಸೇರಿದ್ದು ಎಂಬುದಾಗಿ ಭಾರತದ ಬೆಂಬಲದೊಂದಿಗೆ ನಿಝಾಮರ ವಂಶಸ್ಥರು ನ್ಯಾಯಾಲಯದಲ್ಲಿ ವಾದಿಸಿದರೆ, ಹಣ ತನಗೆ ಸೇರಬೇಕು ಎಂದು ಪಾಕಿಸ್ತಾನವೂ ವಾದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News