ಸರಕಾರಿ ಉಪಕರಣಗಳಲ್ಲಿ ಟಿಕ್‌ಟಾಕ್ ನಿಷೇಧ: ಸೆನೆಟ್ ಸಮಿತಿಯಿಂದ ಮಸೂದೆ ಅಂಗೀಕಾರ

Update: 2020-07-23 15:58 GMT

ವಾಶಿಂಗ್ಟನ್, ಜು. 23: ಚೀನಾ ಒಡೆತನದ ಮೊಬೈಲ್ ವೀಡಿಯೊ ಆ್ಯಪ್ ಟಿಕ್‌ಟಾಕ್‌ನ್ನು ಅಮೆರಿಕದ ಕೇಂದ್ರ ಸರಕಾರದ ಉದ್ಯೋಗಿಗಳು ಸರಕಾರ ನೀಡಿರುವ ಉಪಕರಣಗಳಲ್ಲಿ ಬಳಸುವುದನ್ನು ನಿಷೇಧಿಸುವ ಮಸೂದೆಯೊಂದನ್ನು ಅಮೆರಿಕದ ಸೆನೆಟ್ ಸಮಿತಿಯೊಂದು ಬುಧವಾರ ಅಂಗೀಕರಿಸಿದೆ.

‘ಸರಕಾರಿ ಉಪಕರಣಗಳಲ್ಲಿ ಟಿಕ್‌ಟಾಕನ್ನು ನಿಷೇಧಿಸುವ ಕಾಯ್ದೆ’ಯನ್ನು ಸೆನೆಟರ್ ಜೋಶ್ ಹಾಲಿ ಮಂಡಿಸಿದ್ದು, ಆಂತರಿಕ ಭದ್ರತೆ ಮತ್ತು ಸರಕಾರಿ ವ್ಯವಹಾರಗಳ ಕುರಿತ ಸೆನೆಟ್ ಸಮಿತಿಯು ಅವಿರೋಧವಾಗಿ ಅಂಗೀಕರಿಸಿದೆ. ಇನ್ನು ಅದನ್ನು ಮತದಾನಕ್ಕಾಗಿ ಸೆನೆಟ್‌ನಲ್ಲಿ ಎತ್ತಿಕೊಳ್ಳಲಾಗುವುದು.

ಅಮೆರಿಕದ ಹದಿಹರಯದವರಲ್ಲಿ ಟಿಕ್‌ಟಾಕ್ ಭಾರೀ ಜನಪ್ರಿಯವಾಗಿದೆ. ಹಾಗಾಗಿ, ಅವರ ವೈಯಕ್ತಿಕ ಮಾಹಿತಿಗಳು ಚೀನಾದ ಅಧಿಕಾರಿಗಳಿಗೆ ಸೋರಿಕೆಯಾಗಬಹುದು ಎಂಬ ಭೀತಿಯನ್ನು ಅಮೆರಿಕದ ಸಂಸದರು ಹೊಂದಿದ್ದಾರೆ.

ಚೀನಾದಲ್ಲಿ 2017ರಲ್ಲಿ ಜಾರಿಯಾದ ಕಾನೂನೊಂದರ ಪ್ರಕಾರ, ದೇಶದ ರಾಷ್ಟ್ರೀಯ ಬೇಹುಗಾರಿಕಾ ಕೆಲಸದಲ್ಲಿ ಸಹಕಾರ ಮತ್ತು ಬೆಂಬಲ ನೀಡುವ ಬದ್ಧತೆಯನ್ನು ಆ ದೇಶದ ಕಂಪೆನಿಗಳು ಹೊಂದಿವೆ. ಇದು ಇತರ ದೇಶಗಳ ಆತಂಕಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News