ಪಿಎಸ್‌ಜಿ ತಂಡಕ್ಕೆ ಫ್ರೆಂಚ್ ಕಪ್

Update: 2020-07-26 16:46 GMT

ಪ್ಯಾರಿಸ್, ಜು.26: ನೇಮರ್ ದಾಖಲಿಸಿದ ಏಕೈಕ ಗೋಲು ನೆರವಿನಲ್ಲಿ ಪ್ಯಾರಿಸ್ ಸೇಂಟ್ ಜರ್ಮೈನ್ (ಪಿಎಸ್‌ಜಿ)ತಂಡ 10 ಮಂದಿಯ ಸೇಂಟ್ ಎಟಿಯೆನ್ ತಂಡದ ವಿರುದ್ಧ 1-0 ಅಂತರದಲ್ಲಿ ಜಯ ಗಳಿಸುವ ಮೂಲಕ 13ನೇ ಕೊಪಾ ಡಿ ಫ್ರಾನ್ಸ್ ಪ್ರಶಸ್ತಿಯನ್ನು ಬಾಚಿಕೊಂಡಿದೆ.

ಶನಿವಾರದಂದು ಖಾಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಿಎಸ್‌ಜಿ ತಂಡದ ಕೈಲಿಯನ್ ಬಾಪೆ ಗಾಯಗೊಂಡು ನಿರ್ಗಮಿಸಿದ ಬಳಿಕ 14ನೇ ನಿಮಿಷದಲ್ಲಿ ಬ್ರೆಝಿಲ್‌ನ ಸ್ಟಾರ್ ಆಟಗಾರ ನೇಮರ್ ಗೋಲು ದಾಖಲಿಸಿದರು.

ಬಾಪೆ ಗೋಲು ಗಳಿಸಲು ನಡೆಸಿದ ಪ್ರಯತ್ನವನ್ನು ಗೋಲ್‌ಕೀೀಪರ್ ಜೆಸ್ಸಿ ಮೌಲಿನ್ ಆರಂಭದಲ್ಲೇ ವಿಫಲಗೊಳಿಸಿದರು. 80,000 ಆಸನಗಳ ಸಾಮರ್ಥ್ಯದ ಸ್ಟೇಡ್ ಡಿ ಫ್ರಾನ್ಸ್ ಕ್ರೀಡಾಂಗಣದಲ್ಲಿ ಕೇವಲ 5,000 ಅಭಿಮಾನಿಗಳು ಕಟ್ಟುನಿಟ್ಟಾದ ಆರೋಗ್ಯ ಶಿಷ್ಟಾಚಾರಗಳೊಂದಿಗೆ ಉಪಸ್ಥಿತರಿದ್ದರು. ಇದಕ್ಕೂ ಮೊದಲು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಕ್ರೀಡಾಂಗಣದಲ್ಲಿ ಆಟಗಾರರನ್ನು ಭೇಟಿಯಾದರು. ಭೇಟಿಯ ವೇಳೆ ಸುರಕ್ಷಿತ ಅಂತರವನ್ನು ಕಾಯ್ದುಕೊಂಡಿದ್ದರು ಮತ್ತು ಮಾಸ್ಕ್ ಧರಿಸಿದ್ದರು.

ದೀರ್ಘ ವಿರಾಮದ ನಂತರ ಫ್ರಾನ್ಸ್‌ನಲ್ಲಿ ನಡೆದ ಮೊದಲ ವೃತ್ತಿಪರ ಪಂದ್ಯದ ವೇಳೆ ಹಬ್ಬದ ವಾತಾವರಣ ಇರಲಿಲ್ಲ. ಪಂದ್ಯದ ಮೊದಲು ಕ್ರೀಡಾಂಗಣದ ಸುತ್ತ ಬೆರಳೆಣಿಕೆಯಷ್ಟು ಜನರು ಮಾತ್ರ ಇದ್ದರು.

ಆರಂಭಿಕ ಸೆಕೆಂಡುಗಳಲ್ಲಿ ಪಂದ್ಯ ರೋಚಕತೆಯಿಂದ ಕೂಡಿತ್ತು. ಯೆವಾನ್ ಮ್ಯಾಕಾನ್ ಅವರು ನೇಮರ್‌ನ್ನು ದೂಡಿ ಹಾಕುವ ಮೂಲಕ ಹಳದಿ ಕಾರ್ಡ್ ಪಡೆದರು. ಸೇಂಟ್ ಎಟಿಯೆನ್ ತಂಡದ ಡೆನಿಸ್ ಬೌಂಗಾ ಐದನೇ ನಿಮಿಷದಲ್ಲಿ ಗೋಲು ಬಾರಿಸಲು ಯತ್ನಿಸಿದರು. ಆದರೆ ಚೆಂಡು ಗೋಲು ಪೆಟ್ಟಿಗೆಯ ಕಂಬಕ್ಕೆ ಬಡಿಯುವುದರೊಂದಿಗೆ ಅವರ ಪ್ರಯತ್ನ ವಿಫಲಗೊಂಡಿತು. 26ನೇ ನಿಮಿಷದಲ್ಲಿ ಸೇಂಟ್ ಎಟಿಯೆನ್ ನಾಯಕ ಲೋಯಿಕ್ ಪೆರಿನ್ ಅವರ ಒರಟು ಟ್ಯಾಕ್ಲ್‌ಗೆ ಬಾಪೆಗಾಯಗೊಂಡು ಆಟದಿಂದ ಹೊರಗುಳಿಯುವಂತಾಯಿತು. ಈ ತಪ್ಪಿಗಾಗಿ ಪೆರಿನ್‌ಗೆ ಕೆಂಪು ಕಾರ್ಡ್ ದರ್ಶನವಾಗಿ ಕೊನೆಯ ಪಂದ್ಯದಲ್ಲಿ ಹೊರದಬ್ಬಲ್ಪಟ್ಟರು. ‘‘ನಾವು ಫೈನಲ್ ಗೆದ್ದಿದ್ದೇವೆ ಮತ್ತು ಅದು ನಮಗೆ ಮುಖ್ಯವಾಗಿದೆ ’’ಎಂದು ಪಿಎಸ್‌ಜಿ ಕೋಚ್ ಥಾಮಸ್ ತುಚೆಲ್ ಹೇಳಿದರು. ಅವರ ತಂಡವು ಕಳೆದ ವರ್ಷದ ಫೈನಲ್‌ನಲ್ಲಿ ಸ್ಟೇಡ್ ರೆನ್ನೆಸ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ ಸೋಲು ಅನುಭವಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News