ಮೂರನೇ ಟೆಸ್ಟ್‌: ಇಂಗ್ಲೆಂಡ್‌ 369 ರನ್‌ಗೆ ಆಲೌಟ್

Update: 2020-07-26 16:49 GMT

ಮ್ಯಾಂಚೆಸ್ಟರ್, ಜು.26: ಓಲ್ಡ್ ಟ್ರಾಫೋರ್ಡ್‌ನಲ್ಲಿ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್‌ನ ಎರಡನೇ ದಿನವಾಗಿರುವ ಶನಿವಾರ ಊಟದ ವಿರಾಮಕ್ಕೂ ಮೊದಲು ಪ್ರವಾಸಿ ವೆಸ್ಟ್‌ಇಂಡೀಸ್ ತಂಡ ಆತಿಥೇಯ ಇಂಗ್ಲೆಂಡ್‌ನ್ನು ಮೊದಲ ಇನಿಂಗ್ಸ್‌ನಲ್ಲಿ 369 ರನ್‌ಗಳಿಗೆ ನಿಯಂತ್ರಿಸಿದೆ.

ಬಳಿಕ ಮೊದಲ ಇನಿಂಗ್ಸ್ ಆರಂಭಿಸಿದ ವೆಸ್ಟ್‌ಇಂಡೀಸ್ 39 ಓವರ್‌ಗಳಲ್ಲಿ 101ಕ್ಕೆ ಐದು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಮೊದಲ ದಿನದಾಟದಂತ್ಯಕ್ಕೆ 85.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 258 ರನ್ ಗಳಿಸಿದ್ದ ಇಂಗ್ಲೆಂಡ್ ಈ ಮೊತ್ತಕ್ಕೆ 111 ರನ್ ಸೇರಿಸುವಷ್ಟರಲ್ಲಿ ಆಲೌಟಾಗಿದೆ.

ಮೊದಲ ದಿನದಾಟದಂತ್ಯಕ್ಕೆ ಇಂಗ್ಲೆಂಡ್‌ನ ಒಲ್ಲಿ ಪೋಪ್ 91 ರನ್ ಮತ್ತು ಜೋಸ್ ಬಟ್ಲರ್ 56 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು.

ವಿಂಡೀಸ್‌ನ ಗೇಬ್ರಿಯಲ್ ಮತ್ತು ರೋಚ್ ಎರಡನೇ ದಿನದಾಟದಲ್ಲಿ ಬಹಳ ಬೇಗನೆ ಇಂಗ್ಲೆಂಡ್‌ನ ಎರಡು ವಿಕೆಟ್‌ಗಳನ್ನು ಉಡಾಯಿಸಿದರು.

ಶಾನೊನ್ ಗೇಬ್ರಿಯಲ್ ಅವರು ಪೋಪ್‌ಗೆ ಶತಕ ಗಳಿಸಲು ಅವಕಾಶ ನೀಡಲಿಲ್ಲ. ಮೊದಲ ದಿನದ ಮೊತ್ತಕ್ಕೆ ಒಂದು ರನ್ ಸೇರಿಸಲು ಸಾಧ್ಯವಾಗದೆ ಬೌಲ್ಡ್ ಆಗಿ ನಿರಾಸೆಯಿಂದಲೇ ಪೋಪ್‌ಪೆವಿಲಿಯನ್ ಸೇರಿದರು.

ಕ್ರಿಸ್ ವೋಕ್ಸ್(1) ಅವರು ರೋಚ್‌ಗೆ ವಿಕೆಟ್‌ಗೆ ಒಪ್ಪಿಸಿದರು. ಜೋಸ್ ಬಟ್ಲರ್ 67 ರನ್ ಗಳಿಸಿ ನಿರ್ಗಮಿಸಿದರು. 280 ರನ್ ತಲುಪುವಷ್ಟರಲ್ಲಿ ಇಂಗ್ಲೆಂಡ್‌ನ 8 ವಿಕೆಟ್‌ಗಳು ಪತನಗೊಂಡವು. ಈ ಹಂತದಲ್ಲಿ ಇಂಗ್ಲೆಂಡ್‌ನ ಬ್ಯಾಟಿಂಗ್‌ನ್ನು ಮುನ್ನಡೆಸಿದ ಸ್ಟುವರ್ಟ್ ಬ್ರಾಡ್ ವೇಗದ ಅರ್ಧಶತಕ ದಾಖಲಿಸಿದರು. ಅವರು ಇಂಗ್ಲೆಂಡ್ ಪರ ಕೇವಲ 33 ಎಸೆತಗಳಲ್ಲಿ (8 ಬೌ, 1ಸಿ) ಜಂಟಿ-ಮೂರನೇ ಅತಿ ವೇಗದ ಟೆಸ್ಟ್ ಅರ್ಧಶತಕವನ್ನು ದಾಖಲಿಸಿದರು.

200ನೇ ಟೆಸ್ಟ್ ವಿಕೆಟ್‌ನ್ನು ದಾಟಿದ ಶಾನನ್ ಗೇಬ್ರಿಯಲ್ ಮತ್ತು ಕೆಮರ್ ರೋಚ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಬ್ರಾಡ್ ಅಂತಿಮವಾಗಿ 45 ಎಸೆತಗಳಲ್ಲಿ 62 ರನ್ ಗಳಿಸಿ ಚೇಸ್ ಅವರ ಬೌಲಿಂಗ್‌ನಲ್ಲಿ ಮಿಡ್ ವಿಕೆಟ್‌ನಲ್ಲಿ ಬ್ಲಾಕ್‌ವುಡ್‌ಗೆ ಕ್ಯಾಚ್ ಪಡೆದರು, ಡೊಮಿನಿಕ್ ಬೆಸ್ ಅವರೊಂದಿಗೆ 76 ರನ್‌ಗಳ ಜೊತೆಯಾಟ ನೀಡಿದರು. ಬೆಸ್ 18 ರನ್ ಗಳಿಸಿ ಔಟಾಗದೆ ಉಳಿದರು. ಜೇಮ್ಸ್ ಆ್ಯಂಡರ್ಸನ್ 11 ರನ್ ಗಳಿಸಿ ಔಟಾಗುವುದರೊಂದಿಗೆ ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್ ಮುಗಿಸಿತು.

ಪ್ರವಾಸಿಗರು ಇಂಗ್ಲೆಂಡ್ ಇನಿಂಗ್ಸ್‌ನ್ನು ಬೇಗನೆ ಮುಗಿಸುವ ಯೋಜನೆಯಲ್ಲಿದ್ದರು. ಆದರೆ ಬ್ರಾಡ್ ವೆಸ್ಟ್ ಇಂಡೀಸ್‌ಗೆ ತಿರುಗೇಟು ನೀಡಿದರು. ಅವರು ನಿರ್ಗಮಿಸಿದ ನಂತರ, ಬಾಲಂಗೋಚಿ ಜೇಮ್ಸ್ ಆ್ಯಂಡರ್ಸನ್ ಕೊನೆಯ ವಿಕೆಟ್ ಬೀಳುವ ಮೊದಲು ಡಬಲ್ ಅಂಕಿಗಳನ್ನು ಪಡೆಯುವ ಮೂಲಕ ಪ್ರವಾಸಿಗರಿಗೆ ಹತಾಶೆಯನ್ನುಂಟು ಮಾಡಿದರು.

ಸಂಕ್ಷಿಪ್ತ ಸ್ಕೋರ್ ವಿವರ

ಇಂಗ್ಲೆಂಡ್ ಮೊದಲ ಇನಿಂಗ್ಸ್: 111.5 ಓವರ್‌ಗಳಲ್ಲಿ ಆಲೌಟ್ 369(ಪೋಪ್ 91, ಬಟ್ಲರ್ 67, ಬ್ರಾಡ್ 62, ಬರ್ನ್ಸ್ 57; ರೋಚ್ 72ಕ್ಕೆ 4) ವೆಸ್ಟ್‌ಇಂಡೀಸ್ 38 ಓವರ್‌ಗಳಲ್ಲಿ 101/5(ಕ್ಯಾಂಪ್‌ಬೆಲ್ 32)

Writer - ಮ್ಯಾಂಚೆಸ್ಟರ್,

contributor

Editor - ಮ್ಯಾಂಚೆಸ್ಟರ್,

contributor

Similar News