ಮೂರನೇ ಟೆಸ್ಟ್: ಆಂಗ್ಲರ ಮೇಲುಗೈ

Update: 2020-07-26 17:10 GMT

ಮ್ಯಾಂಚೆಸ್ಟರ್, ಜು.26: ಇಲ್ಲಿ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಪ್ರವಾಸಿ ವೆಸ್ಟ್‌ಇಂಡೀಸ್ ವಿರುದ್ಧ ಇಂಗ್ಲೆಂಡ್ 172 ರನ್‌ಗಳ ಮುನ್ನಡೆ ಸಾಧಿಸಿದೆ. ಟೆಸ್ಟ್‌ನ ಮೂರನೇ ದಿನವಾಗಿರುವ ರವಿವಾರ ವೆಸ್ಟ್‌ಇಂಡೀಸ್ ತಂಡ ಮೊದಲ ಇನಿಂಗ್ಸ್‌ನಲ್ಲಿ ಸ್ಟುವರ್ಟ್ ಬ್ರಾಡ್ (31ಕ್ಕೆ6) ದಾಳಿಗೆ ಸಿಲುಕಿ 197 ರನ್‌ಗಳಿಗೆ ಆಲೌಟಾಗಿದೆ.

ಇದರೊಂದಿಗೆ ನಿರ್ಣಾಯಕ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಪಂದ್ಯದ ಮೇಲೆ ಹಿಡಿತ ಸಾಧಿಸಿರುವುದು ಸ್ಪಷ್ಟಗೊಂಡಿದೆ. ಎರಡನೇ ದಿನ ಆಟ ನಿಂತಾಗ ವೆಸ್ಟ್‌ಇಂಡೀಸ್ 47.1 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 137 ರನ್ ಗಳಿಸಿತ್ತು.

ನಾಯಕ ಹೋಲ್ಡರ್ 24ರನ್ ಮತ್ತು ಶಾನ್ ಡೊವ್ರಿಚ್ 10 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದರು. ಇವರು ಮೂರನೇ ದಿನದಾಟವನ್ನು ಮುಂದುವರಿಸಿ 7ನೇ ವಿಕೆಟ್‌ಗೆ ಜೊತೆಯಾಟದಲ್ಲಿ 68 ರನ್ ಸೇರಿಸಿದರು.

58.3ನೇ ಓವರ್‌ನಲ್ಲಿ ಹೋಲ್ಡರ್ ರನ್ನು ಬ್ರಾಡ್ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಹೋಲ್ಡರ್ 46 ರನ್(82ಎ, 6ಬೌ) ಗಳಿಸಿ ನಿರ್ಗಮಿಸುವುದರೊಂದಿಗೆ 4 ರನ್‌ಗಳಿಂದ ಅರ್ಧಶತಕ ವಂಚಿತಗೊಂಡರು. ಬಳಿಕ ರಾಕೀಮ್ ಕಾರ್ನ್‌ವಾಲ್‌ರನ್ನು (10) ಬ್ರಾಡ್ ಎಲ್‌ಬಿಡಬ್ಲು ಬಲೆಗೆ ಕೆಡವಿದರು. ಕೇಮರ್ ರೋಚ್‌ಗೆ ಬ್ರಾಡ್‌ಖಾತೆ ತೆರೆಯಲು ಬಿಡಲಿಲ್ಲ.ಕೊನೆಯಲ್ಲಿ ಡೊವ್ರಿಚ್(37) ಇವರನ್ನು ಪೆವಿಲಿಯನ್‌ಗಟ್ಟಿದ ಬ್ರಾಡ್ ವಿಂಡೀಸ್‌ನ ಮೊದಲ ಇನಿಂಗ್ಸ್‌ನ್ನು ಊಟದ ವಿರಾಮಕ್ಕೂ ಮೊದಲೇ ಮುಗಿಸಿದರು.

ಎರಡನೇ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಊಟದ ವಿರಾಮದ ಹೊತ್ತಿಗೆ ವಿಕೆಟ್ ನಷ್ಟವಿಲ್ಲದೆ 10 ರನ್ ಗಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News