ದಕ್ಷಿಣ ಕೊರಿಯ ಕಂಪೆನಿಯಿಂದ ಜೂನ್ ವೇಳೆಗೆ 20 ಕೋಟಿ ಕೊರೋನ ಲಸಿಕೆ: ಬಿಲ್ ಗೇಟ್ಸ್
ವಾಶಿಂಗ್ಟನ್, ಜು. 27: ದಕ್ಷಿಣ ಕೊರಿಯದ ಔಷಧ ತಯಾರಿಕಾ ಕಂಪೆನಿ ಎಸ್.ಕೆ. ಬಯೋಸಯನ್ಸ್‌ಗೆ ಮುಂದಿನ ವರ್ಷದ ಜೂನ್ ವೇಳೆಗೆ 20 ಕೋಟಿ ಕೊರೋನ ವೈರಸ್ ಲಸಿಕಾ ಕಿಟ್‌ಗಳನ್ನು ತಯಾರಿಸಲು ಸಾಧ್ಯವಾಗಬಹುದು ಎಂದು ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಬಿಲ್ ಗೇಟ್ಸ್ ದಕ್ಷಿಣ ಕೊರಿಯದ ಅಧ್ಯಕ್ಷ ಮೂನ್ ಜೇ-ಇನ್‌ಗೆ ಬರೆದ ಪತ್ರವೊಂದರಲ್ಲಿ ತಿಳಿಸಿದ್ದಾರೆ.
ಎಸ್.ಕೆ. ಬಯೋಸಯನ್ಸ್ ಕಂಪೆನಿಯ ಜೊತೆಗೆ ಬಿಲ್ ಗೇಟ್ಸ್ ಸಹಭಾಗಿತ್ವ ಹೊಂದಿದ್ದಾರೆ.
ಬಿಲ್ ಗೇಟ್ಸ್ ದಕ್ಷಿಣ ಕೊರಿಯದೊಂದಿಗೆ ನಿಕಟ ಸಹಕಾರ ಹೊಂದಲು ಬಯಸಿದ್ದಾರೆ ಎಂದು ಜುಲೈ 20ರಂದು ಅವರು ಬರೆದ ಪತ್ರವನ್ನು ಉಲ್ಲೇಖಿಸಿ ಸಿಯೋಲ್‌ನಲ್ಲಿರುವ ಅಧ್ಯಕ್ಷೀಯ ಕಚೇರಿ ರವಿವಾರ ಹೇಳಿದೆ.
ಕೋವಿಡ್-19 ಲಸಿಕೆ ಅಭಿವೃದ್ಧಿ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಬಿಲ್ ಗೇಟ್ಸ್‌ರ ಫೌಂಡೇಶನ್ ಮೇ ತಿಂಗಳಲ್ಲಿ ಎಸ್.ಕೆ. ಬಯೋಸಯನ್ಸಸ್‌ಗೆ 3.6 ಮಿಲಿಯ ಡಾಲರ್ (ಸುಮಾರು 27 ಕೋಟಿ ರೂಪಾಯಿ) ನೀಡಿತ್ತು. ದಕ್ಷಿಣ ಕೊರಿಯದ ಕಂಪೆನಿಯು ತನ್ನದೇ ಲಸಿಕೆಯನ್ನು ಅಭಿವೃದ್ಧಿಪಡಿಸುವುದರ ಜೊತೆಗೆ, ಆ್ಯಸ್ಟ್ರಝೆನೆಕ ಪಿಎಲ್‌ಸಿ ಕಂಪೆನಿಯ ಲಸಿಕೆಯನ್ನು ಉತ್ಪಾದಿಸುವ ಗುತ್ತಿಗೆಯನ್ನೂ ಪಡೆದುಕೊಂಡಿದೆ.
ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಸಹಭಾಗಿತ್ವದೊಂದಿಗೆ ಅಭಿವೃದ್ಧಿಪಡಿಸಲಾದ ಆ್ಯಸ್ಟ್ರಝೆನಕದ ಲಸಿಕೆಯು ಮಾನವ ಪರೀಕ್ಷೆಯ ಮೂರನೇ ಹಾಗೂ ಕೊನೆಯ ಹಂತದಲ್ಲಿದೆ ಹಾಗೂ ಕೊರೋನ ವೈರಸ್ ಲಸಿಕೆ ತಯಾರಿಕೆಯ ಜಾಗತಿಕ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿರುವವರ ಸಾಲಿನಲ್ಲಿ ಅದೂ ಸೇರಿದೆ.