ಸುಡಾನ್: ದಾರ್ಫುರ್ ವಲಯದಲ್ಲಿ ಮತ್ತೆ ಹಿಂಸೆ; 60ಕ್ಕೂ ಅಧಿಕ ಸಾವು

Update: 2020-07-27 17:27 GMT

ಖಾರ್ತೂಮ್ (ಸುಡಾನ್), ಜು. 27: ಸುಡಾನ್‌ನ ಪಶ್ಚಿಮ ದಾರ್ಫುರ್ ವಲಯದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಹಿಂಸಾಚಾರದಲ್ಲಿ 60ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಹಾಗೂ ಕನಿಷ್ಠ 60 ಮಂದಿ ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.

ದಾರ್ಫುರ್ ವಲಯದ ಬೈಡದಲ್ಲಿರುವ ಮಸ್ತೇರಿ ಪಟ್ಟಣದ ಮೇಲೆ ಸುಮಾರು 500ರಷ್ಟು ಶಸ್ತ್ರಧಾರಿ ವ್ಯಕ್ತಿಗಳು ಆಕ್ರಮಣ ನಡೆಸಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ (ಯುಎನ್‌ಒಸಿಎಚ್‌ಎ) ನೀಡಿರುವ ಹೇಳಿಕೆಯೊಂದು ತಿಳಿಸಿದೆ.

ದಾಳಿಕೋರರು ಸ್ಥಳೀಯ ಮಸಲಿತ್ ಸಮುದಾಯದ ಜನರನ್ನು ಗುರಿಯಾಗಿಸಿ ದಾಳಿ ನಡೆಸಿದರು ಹಾಗೂ ಅವರಿಗೆ ಸೇರಿದ ಮನೆಗಳನ್ನು ದೋಚಿ ಬೆಂಕಿ ಕೊಟ್ಟರು ಎಂದು ಹೇಳಿಕೆ ತಿಳಿಸಿದೆ.

‘‘ಕಳೆದ ವಾರ ಆ ಪಟ್ಟಣದಲ್ಲಿ ಇಂಥ ಹಲವಾರು ಹಿಂಸಾತ್ಮಕ ಘಟನೆಗಳು ನಡೆದಿವೆ. ಈ ಅವಧಿಯಲ್ಲಿ ಹಲವಾರು ಗ್ರಾಮಗಳು ಮತ್ತು ಮನೆಗಳನ್ನು ದುಷ್ಕರ್ಮಿಗಳು ಸುಟ್ಟಿದ್ದಾರೆ, ಅಂಗಡಿಗಳನ್ನು ದೋಚಿದ್ದಾರೆ ಹಾಗೂ ಮೂಲಸೌಕರ್ಯಗಳನ್ನು ಹಾಳುಗೆಡವಿದ್ದಾರೆ’’ ಎಂದು ಅದು ಹೇಳಿದೆ.

ಜಮೀನು ವಿಚಾರದಲ್ಲಿ ಅಲೆಮಾರಿ ಅರಬ್ ಪಂಗಡಗಳೊಂದಿಗೆ ವಿವಾದಗಳನ್ನು ಹೊಂದಿರುವ ಆಫ್ರಿಕದ ರೈತ ಪಂಗಡಗಳನ್ನು ಗುರಿಯಾಗಿಸಿ ದಾಳಿಗಳನ್ನು ನಡೆಸಲಾಗುತ್ತಿದೆ.

ಹೆಚ್ಚಿನ ಭದ್ರತೆಗೆ ಆಗ್ರಹಿಸಿ ಸ್ಥಳೀಯರಿಂದ ಧರಣಿ

ಮಸ್ತೇರಿ ಮೇಲೆ ಶನಿವಾರ ನಡೆದ ದಾಳಿಯ ಹಿನ್ನೆಲೆಯಲ್ಲಿ, ತಮಗೆ ಹೆಚ್ಚಿನ ಭದ್ರತೆ ಬೇಕು ಎಂದು ಒತ್ತಾಯಿಸಿ ಸುಮಾರು 500ರಷ್ಟು ಸ್ಥಳೀಯ ಜನರು ಸರಕಾರಿ ಪ್ರಾಧಿಕಾರವೊಂದರ ಮುಂದೆ ಧರಣಿ ನಡೆಸಿದ್ದಾರೆ.

ಅಧಿಕಾರಿಗಳು ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುವವರೆಗೆ ಮೃತರನ್ನು ದಫನ ಮಾಡುವುದಿಲ್ಲ ಎಂದು ಮಸಲಿತ್ ಸಮುದಾಯದ ಸದಸ್ಯರು ಎಚ್ಚರಿಸಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ ತಿಳಿಸಿದೆ.

ಪ್ರಜೆಗಳು ಮತ್ತು ನಾಟಿ ಕಾರ್ಯಕ್ಕೆ ರಕ್ಷಣೆ ನೀಡಲು ಸಂಘರ್ಷ ಪೀಡಿತ ವಲಯಕ್ಕೆ ಭದ್ರತಾ ಪಡೆಗಳನ್ನು ಕಳುಹಿಸುವುದಾಗಿ ಸುಡಾನ್ ಪ್ರಧಾನಿ ಅಬ್ದುಲ್ಲಾ ಹಮ್‌ದೋಕ್ ರವಿವಾರ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News