ಗುಮಾಸ್ತ ಹುದ್ದೆಗೆ ಅರ್ಜಿ ಸಲ್ಲಿಸಿದ ಭಾರತದ ವಿಕಲಚೇತನ ಕ್ರಿಕೆಟ್ ತಂಡದ ಮಾಜಿ ನಾಯಕ ದಿನೇಶ್ ಸೈನ್!

Update: 2020-07-28 07:56 GMT

ಹೊಸದಿಲ್ಲಿ, ಜು.28: ವಿಕಲಚೇತನ ಕ್ರಿಕೆಟ್ ತಂಡದಲ್ಲಿ ಭಾರತವನ್ನು ಪ್ರತಿನಿಧಿಸಿರುವ ದಿನೇಶ್ ಸೈನ್ ಇದೀಗ ರಾಷ್ಟ್ರೀಯ ಉದ್ದೀಪನ ತಡೆ ಘಟಕ(ನಾಡಾ)ದ ಕಚೇರಿಯ ಗುಮಾಸ್ತ ಹುದ್ದೆಗೆ ಅರ್ಜಿ ಹಾಕಿದ್ದಾರೆ.

ಹುಟ್ಟಿನಿಂದಲೇ ಪೊಲಿಯೊ ಪೀಡಿತರಾಗಿರುವ ಸೈನ್ 2015 ಹಾಗೂ 2019ರ ಮಧ್ಯೆ ಭಾರತದ ವಿಕಲಚೇತನ ಕ್ರಿಕೆಟ್ ತಂಡದಲ್ಲಿ ಆಡಿದ್ದರು. ಇದೀಗ 35ನೆ ವಯಸ್ಸಿಗೆ ಕಾಲಿಟ್ಟಿರುವ ಅವರು ತಮ್ಮ ಕುಟುಂಬ ನಿರ್ವಹಣೆಗೆ ಕೆಲಸದ ನಿರೀಕ್ಷೆಯಲ್ಲಿದ್ದಾರೆ.

"ನನಗೀಗ 35 ವರ್ಷ. ಮೊದಲ ವರ್ಷದ ಪದವಿ ಶಿಕ್ಷಣ ಪಡೆಯುತ್ತಿರುವೆ. 12ನೇ ತರಗತಿಯ ಬಳಿಕ ಕ್ರಿಕೆಟ್‌ನ್ನು ಮಾತ್ರ ಆಡುತ್ತಿದ್ದೆ. ಭಾರತವನ್ನು ಪ್ರತಿನಿಧಿಸಿರುವ ತನ್ನ ಬಳಿ ಈಗ ಹಣವಿಲ್ಲ. ನಾಡಾದಲ್ಲಿ ಗುಮಾಸ್ತನ ಹುದ್ದೆಯೊಂದು ಖಾಲಿ ಇದೆ. ಈ ಹುದ್ದೆಗೆ ಸಾಮಾನ್ಯ ಜನರಿಗೆ ವಯಸ್ಸಿನ ಮಿತಿ 25. ವಿಕಲಚೇತನರಿಗೆ 35 ವರ್ಷ. ಹೀಗಾಗಿ ನನಗೆ ಸರಕಾರಿ ಕೆಲಸ ಗಿಟ್ಟಿಸಲುಇದು ನನಗೆ ಕೊನೆಯ ಅವಕಾಶವಾಗಿದೆ'' ಎಂದು ಈ ಹಿಂದೆ ಜಿಲ್ಲಾ ನ್ಯಾಯಾಲಯದಲ್ಲಿ ಗುಮಾಸ್ತ ಹುದ್ದೆಗೆ ಪ್ರಯತ್ನಿಸಿದ್ದ ದಿನೇಶ್ ಹೇಳಿದರು.

"ಪೊಲಿಯೊದಿಂದಾಗಿ ನನ್ನ ಒಂದು ಕಾಲು ಬಾಧಿತವಾಗಿದೆ. ಕ್ರಿಕೆಟ್ ಮೇಲಿನ ಮೋಹ ನನ್ನನ್ನು ವಿಕಲಚೇತನ ಎಂಬ ಭಾವನೆ ಮೂಡದಂತೆ ಮಾಡಿತು. 2015ರ ಆವೃತ್ತಿಯ ಐದು ದೇಶಗಳ ಟೂರ್ನಮೆಂಟ್‌ನಲ್ಲಿ ಭಾರತ ಜಯಶಾಲಿಯಾಗಿದ್ದು,ಈ ಟೂರ್ನಿಯಲ್ಲಿ ನಾನು 4 ಪಂದ್ಯಗಳಲ್ಲಿ 8 ವಿಕೆಟ್‌ಗಳನ್ನು ಪಡೆದಿದ್ದೆ. ಪಾಕಿಸ್ತಾನ ವಿರುದ್ಧ 2 ವಿಕೆಟ್ ಪಡೆದಿದ್ದೆ'' ಎಂದು ದಿನೇಶ್ ಹಳೆಯ ನೆನಪು ಮೆಲುಕು ಹಾಕಿದರು.

ದಿನೇಶ್ 2019ರಲ್ಲಿ ಓರ್ವ ಅಧಿಕಾರಿಯಾಗಿ ಭಾರತ ಕ್ರಿಕೆಟ್ ತಂಡದೊಂದಿಗೆ ಇಂಗ್ಲೆಂಡ್‌ಗೆ ತೆರಳಿದ್ದರು. ಆಗ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News