ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ಭಾರತದ ವೀಲ್‌ಚೇರ್ ಕ್ರಿಕೆಟಿಗ, ಕೋಚ್ ರಾಜೇಂದರ್ ಸಿಂಗ್

Update: 2020-07-30 14:33 GMT

ಹೊಸದಿಲ್ಲಿ, ಜು.30: ಕೊರೋನ ವೈರಸ್‌ನಿಂದಾಗಿ ದೇಶಾದ್ಯಂತ ಲಕ್ಷಾಂತರ ಜನರು ನಿರುದ್ಯೋಗಿಗಳಾಗಿದ್ದು, ಭಾರತದ ರಾಷ್ಟ್ರೀಯ ವೀಲ್‌ಚೇರ್ ಕ್ರಿಕೆಟ್ ತಂಡದ ಆಟಗಾರ ಹಾಗೂ ಕೋಚ್ ರಾಜೇಂದರ್ ಸಿಂಗ್ ಧಾಮಿ ಕೂಡ ಇದಕ್ಕೆ ಹೊರತಾಗಿಲ್ಲ.

ಬಹುಮಾನ ಮೊತ್ತ, ಪ್ರಾಯೋಜಕತ್ವ ಹಾಗೂ ಕೋಚ್ ಆಗಿ ಗಳಿಸುತ್ತಿದ್ದ ಆದಾಯದಲ್ಲೆ ಬದುಕುತ್ತಿದ್ದ ರಾಜೇಂದರ್ ಈಗ ಜೀವನ ನಿರ್ವಹಣೆಗೆ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾರೆ.

ವೃದ್ಧ ತಂದೆ-ತಾಯಿ ಹಾಗೂ ಸಹೋದರರನ್ನು ಸಲಹುವ ಹೊಣೆ ಹೊತ್ತಿರುವ ರಾಜೇಂದರ್ ಉತ್ತರಾಖಂಡದಲ್ಲಿರುವ ತಮ್ಮ ತವರುಪಟ್ಟಣ ರೈಕೊಟ್‌ನಲ್ಲಿ ಸರಕಾರಿ ಯೋಜನೆಯ ಅಡಿ ಕಲ್ಲುಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ.

ನಾನು ಕೋಚ್ ನೀಡಿರುವ ತಂಡದೊಂದಿಗೆ ಮಾರ್ಚ್ ನಲ್ಲಿ ಬೆಂಗಳೂರಿಗೆ ತೆರಳಿದ್ದೆ. ಅದೆ ವೇಳೆಗೆ ಲಾಕ್‌ಡೌನ್ ಘೋಷಣೆಯಾದ ಕಾರಣ ಟೂರ್ನಿ ರದ್ದಾಯಿತು. ಮನೆಗೆ ವಾಪಸಾದ ಬಳಿಕ ಜೀವನ ನಿರ್ವಹಣೆ ಕಷ್ಟವಾದಾಗ ಕಲ್ಲು ಒಡೆಯುವ ಕೆಲಸಕ್ಕೆ ಹೋಗಲಾರಂಭಿಸಿದೆ. ದಿನಕ್ಕೆ 400 ರೂ. ಆದಾಯ ಗಳಿಸುತ್ತಿದ್ದೇನೆ ಎಂದು ರಾಜೇಂದರ್ ಹೇಳಿದ್ದಾರೆ.

ರಾಜೇಂದರ್‌ಗೆ ಎರಡು ವರ್ಷವಾಗಿದ್ದಾಗ ದೇಹದ ಕೆಳಭಾಗಕ್ಕೆ ಪಾರ್ಶ್ವವಾಯು ಬಡಿದಿತ್ತು. ಆದರೆ, ಅವರ ಕ್ರೀಡೆ ಮೇಲಿನ ವ್ಯಾಮೋಹ ಕಡಿಮೆಯಾಗಲಿಲ್ಲ. ಕ್ರಿಕೆಟ್‌ನಲ್ಲಿ ಆಲ್‌ರೌಂಡರ್ ಆಗಿ ಮಿಂಚುವ ಮೊದಲು ರಾಷ್ಟ್ರಮಟ್ಟದಲ್ಲಿ ಶಾಟ್‌ಪುಟ್ ಹಾಗೂ ಡಿಸ್ಕಸ್ ಎಸೆತದಲ್ಲಿ ಪದಕಗಳನ್ನು ಜಯಿಸಿದ್ದರು. ರಾಜೇಂದರ್ ಕುರಿತ ಸುದ್ದಿ ಪ್ರಕಟವಾಗುತ್ತಲ್ಲೇ ಎಚ್ಚತ್ತ ಭಾರತೀಯ ಒಲಿಂಪಿಕ್ಸ್ ಸಂಸ್ಥೆ 50,000 ರೂ. ಧನ ಸಹಾಯ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News