ಧೋನಿಯ ವಿಶ್ವ ದಾಖಲೆ ಮುರಿದ ಮೊರ್ಗನ್

Update: 2020-08-05 08:16 GMT

ಲಂಡನ್,ಆ.5: ನಾಯಕನಾಗಿ ಗರಿಷ್ಠ ಸಿಕ್ಸರ್‌ಗಳನ್ನು ಸಿಡಿಸಿದ ಇಂಗ್ಲೆಂಡ್ ನಾಯಕ ಇಯಾನ್ ಮೊರ್ಗನ್ ಭಾರತದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಎಂ.ಎಸ್.ಧೋನಿ ಅವರ ಹೆಸರಲ್ಲಿದ್ದ ದೀರ್ಘಕಾಲದ ವಿಶ್ವ ದಾಖಲೆಯೊಂದನ್ನು ಮುರಿದರು. ಸೌತಾಂಪ್ಟನ್‌ನಲ್ಲಿ ಮಂಗಳವಾರ ನಡೆದ ಐರ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಮೊರ್ಗನ್ ಈ ಮೈಲುಗಲ್ಲು ತಲುಪಿದರು.

 ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 328 ಸಿಕ್ಸರ್‌ಗಳನ್ನು ಸಿಡಿಸಿರುವ ಮೊರ್ಗನ್ 212ನೇ ಸಿಕ್ಸರ್ ಸಿಡಿಸುವ ಮೂಲಕ ನಾಯಕನಾಗಿ ಗರಿಷ್ಠ ಸಿಕ್ಸರ್ ದಾಖಲೆ(212)ನಿರ್ಮಿಸಿದ್ದ ಧೋನಿಯ ದಾಖಲೆಯನ್ನು ಮುರಿದಿದ್ದಾರೆ.

ಧೋನಿ 332 ಪಂದ್ಯಗಳಲ್ಲಿ ನಾಯಕನಾಗಿ 211 ಸಿಕ್ಸರ್‌ಗಳನ್ನು ಸಿಡಿಸಿದ್ದರು. ಮೊರ್ಗನ್ ಅವರು ಧೋನಿಗಿಂತ ಕಡಿಮೆ ಪಂದ್ಯಗಳಲ್ಲಿ (163) 212 ಸಿಕ್ಸರ್ ಸಿಡಿಸಿ ದಾಖಲೆ ನಿರ್ಮಿಸಿದ್ದಾರೆ.

ಧೋನಿ ಎಲ್ಲ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಮೊರ್ಗನ್‌ಗಿಂತ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಧೋನಿ ಎಲ್ಲ 3 ಮಾದರಿ ಕ್ರಿಕೆಟ್‌ನಲ್ಲಿ ಒಟ್ಟು 359 ಸಿಕ್ಸರ್‌ಗಳನ್ನು ಸಿಡಿಸಿದರೆ,ಮೊರ್ಗನ್ 328 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.

ಗರಿಷ್ಠ ಸಿಕ್ಸರ್‌ಗಳನ್ನು ಸಿಡಿಸಿದ ವಿಶ್ವದ ಕ್ರಿಕೆಟ್ ನಾಯಕರ ಪಟ್ಟಿಯಲ್ಲಿ ರಿಕಿ ಪಾಂಟಿಂಗ್(171 ಸಿಕ್ಸರ್)ಮೂರನೇ ಸ್ಥಾನದಲ್ಲಿದ್ದಾರೆ. ಆನಂತರ ನ್ಯೂಝಿಲ್ಯಾಂಡ್‌ನ ಬ್ರೆಂಡನ್‌ ಮೆಕಲಮ್(170) ಅವರಿದ್ದಾರೆ.

ಮೊರ್ಗನ್ ಮಂಗಳವಾರ ನಡೆದಿದ್ದ ಪಂದ್ಯದಲ್ಲಿ ಕೇವಲ 84 ಎಸೆತಗಳಲ್ಲಿ ಐದು ಸಿಕ್ಸರ್‌ಗಳ ಸಹಿತ 106 ರನ್ ಗಳಿಸಿದ್ದರು. ಮೊರ್ಗನ್ ಸಾಹಸದಿಂದ ಇಂಗ್ಲೆಂಡ್ 328 ರನ್ ಗಳಿಸಿದ್ದರು.

ಅಂತರ್‌ರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ನಾಯಕನಾಗಿ ಗರಿಷ್ಠ ಸಿಕ್ಸರ್ ಸಿಡಿಸಿದವರು

212- ಇಯಾನ್ ಮೊರ್ಗನ್

211-ಎಂಎಸ್ ಧೋನಿ

171- ರಿಕಿ ಪಾಂಟಿಂಗ್

170-ಬ್ರೆಂಡನ್ ಮೆಕಲಮ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News