ಈ ವರ್ಷದ ಐಪಿಎಲ್‌ನಲ್ಲಿ ವಿವೊ ಪ್ರಾಯೋಜಕತ್ವ ಇಲ್ಲ: ಬಿಸಿಸಿಐ

Update: 2020-08-07 06:28 GMT

ಹೊಸದಿಲ್ಲಿ: ಚೀನಾ ಹಾಗೂ ಭಾರತದ ನಡುವೆ ರಾಜತಾಂತ್ರಿಕ ಉದ್ವಿಗ್ನತೆ ಹೆಚ್ಚಾಗುತ್ತಿರುವ ನಡುವೆ ಬಿಸಿಸಿಐ ಗುರುವಾರ ಚೀನಾದ ಮೊಬೈಲ್ ತಯಾರಕ ಕಂಪೆನಿ ವಿವೊದೊಂದಿಗೆ ಮುಂಬರುವ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಟೈಟಲ್ ಪ್ರಾಯೋಜಕತ್ವ ಒಪ್ಪಂದವನ್ನು ಅಮಾನತುಗೊಳಿಸಿದೆ.

ಈ ವರ್ಷದ ಐಪಿಎಲ್‌ನಲ್ಲಿ ಚೀನಾದ ವಿವೊ ಕಂಪೆನಿಯು ಶೀರ್ಷಿಕೆ ಪ್ರಾಯೋಜಕತ್ವ ನೀಡುವುದಿಲ್ಲ ಎಂದು ಒಂದು ಗೆರೆಯ ಹೇಳಿಕೆ ನೀಡಿರುವ ಬಿಸಿಸಿಐ, ಹೆಚ್ಚಿನ ವಿವರಣೆ ನೀಡಿಲ್ಲ.

‘‘ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಹಾಗೂ ವಿವೊ ಮೊಬೈಲ್ ಇಂಡಿಯಾ ಪ್ರೈ.ಲಿ. 2020ರ ಇಂಡಿಯನ್‌ಪ್ರೀಮಿಯರ್ ಲೀಗ್‌ಗೆ ತಮ್ಮ ಪಾಲುದಾರಿಕೆಯನ್ನು ಅಮಾನತುಗೊಳಿಸಲು ನಿರ್ಧರಿಸಿವೆ’’ಎಂದು ಪತ್ರಿಕಾ ಪ್ರಕಟನೆಯೊಂದರಲ್ಲಿ ತಿಳಿಸಲಾಗಿದೆ.

ವಿವೊ ಕಂಪೆನಿಯು 2,190 ಕೋ.ರೂ.ಗೆ 2018ರಿಂದ 2022ರ ತನಕ ಐದು ವರ್ಷಗಳ ಅವಧಿಗೆ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕನ್ನು ಬಾಚಿಕೊಂಡಿತ್ತು. ಪ್ರತಿ ವರ್ಷ ಸುಮಾರು 440 ಕೋ.ರೂ. ಪ್ರಾಯೋಜಕತ್ವ ಹಣ ಪಾವತಿಸಲು ಒಪ್ಪಿಕೊಂಡಿತ್ತು.

ಯುಎಇನಲ್ಲಿ ಸೆಪ್ಟಂಬರ್ 19ರಿಂದ ಆರಂಭವಾಗಲಿರುವ ಈ ವರ್ಷದ ಐಪಿಎಲ್‌ನಲ್ಲಿ ಬಿಸಿಸಿಐ ಹೊಸ ಶೀರ್ಷಿಕೆ ಪ್ರಾಯೋಜಕರನ್ನು ಆಯ್ಕೆ ಮಾಡುವುದು ಕ್ರಿಕೆಟ್ ಮಂಡಳಿಯ ಸಂವಿಧಾನದ ಪ್ರಕಾರ ಕಡ್ಡಾಯವಾಗಿದೆ.

 ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷದ ಐಪಿಎಲ್ ಟೂರ್ನಿಯನ್ನು ಯುಎಇನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಐಪಿಎಲ್-2020ಕ್ಕೆ ಬಿಸಿಸಿಐ ಬುಧವಾರದಂದು ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್(ಎಸ್‌ಒಪಿ)ಅಂತಿಮಗೊಳಿಸಿದ್ದು, ಅದನ್ನು ಫ್ರಾಂಚೈಸಿಗಳಿಗೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News