ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದ ಇಂಗ್ಲೆಂಡ್‌ ವೇಗಿ ಆ್ಯಂಡರ್ಸನ್

Update: 2020-08-11 05:43 GMT

ಲಂಡನ್, ಆ.10: ಇತ್ತೀಚೆಗೆ 38 ನೇ ವರ್ಷಕ್ಕೆ ಕಾಲಿಟ್ಟಿರುವ ಇಂಗ್ಲೆಂಡ್‌ನ ವೇಗಿ ಜಿಮ್ಮಿ ಆ್ಯಂಡರ್ಸನ್ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

ಇತ್ತೀಚೆಗೆ ಅತ್ಯಂತ ನಿರಾಶಾದಾಯಕ ಪ್ರದರ್ಶನವನ್ನು ನೀಡುತ್ತಿದ್ದ ಆ್ಯಂಡರ್ಸನ್ ಪಾಕಿಸ್ತಾನದ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಕೇವಲ 1 ವಿಕೆಟ್ ಪಡೆದಿದ್ದರು. ದೇಶದ ಸಾರ್ವಕಾಲಿಕ ಪ್ರಮುಖ ವಿಕೆಟ್ ಪಡೆದವರಿಗೆ ಇದು ಅಂತ್ಯವೇ? ಎಂಬ ಪ್ರಶ್ನೆಗೆ ‘‘ಇಲ್ಲ, ಖಂಡಿತ ಅಲ್ಲ. ನಾನು ಸಾಧ್ಯವಾದಷ್ಟು ಕಾಲ ಆಡಲು ಬಯಸುತ್ತೇನೆ. ಆದರೆ ನಾನು ಮಾಡಿದ ರೀತಿಯಲ್ಲಿ ಬೌಲಿಂಗ್ ಮಾಡುತ್ತಿದ್ದರೆ, ನಿವೃತ್ತಿ ಹೊಂದುವ ಅವಕಾಶವನ್ನು ನನ್ನ ಕೈಯಿಂದ ತೆಗೆಯಲಾಗುತ್ತದೆ’’ ಎಂದರು.

ಆ್ಯಂಡರ್ಸನ್ ವಯಸ್ಸನ್ನು ಗಮನಿಸಿದರೆ, ಅವರು ನಿವೃತ್ತಿಯ ಹಾದಿಯಲ್ಲಿದ್ದಾರೆ ಎಂಬ ಊಹಾಪೋಹ ಕೇಳಿಬರುತ್ತಿದೆ. ಕಳೆದ ವಾರ ಮೊದಲ ಟೆಸ್ಟ್‌ನಲ್ಲಿ ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ ಮೂರು ವಿಕೆಟ್‌ಗಳ ಜಯ ಗಳಿಸಿತ್ತು. ಆ್ಯಂಡರ್ಸನ್ ಕೇವಲ ಒಂದು ವಿಕೆಟ್ ಪಡೆದಿದ್ದರು.

‘‘ನಾನು ಮೊದಲು ಆಟವಾಡಲು ಪ್ರಾರಂಭಿಸಿದಾಗ ಅದು ನನಗೆ ನೆನಪಿಸಿತು, ನೀವು ನಿರಾಶೆಗೊಂಡಾಗ ಮತ್ತು ಸ್ವಲ್ಪ ಕೋಪಗೊಂಡಾಗ, ನೀವು ವೇಗವಾಗಿ ಬೌಲಿಂಗ್ ಮಾಡಲು ಪ್ರಯತ್ನಿಸುತ್ತೀರಿ. ಅದು ಸ್ಪಷ್ಟವಾಗಿ ಸಹಾಯ ಮಾಡುವುದಿಲ್ಲ’’ಎಂದರು.

ಟೆಸ್ಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ಸಾರ್ವಕಾಲಿಕ ಬೌಲರ್‌ಗಳಲ್ಲಿ ಆ್ಯಂಡರ್ಸನ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಸ್ಪಿನ್ ಬೌಲರ್‌ಗಳಾದ ಮುತ್ತಯ್ಯ ಮುರಳೀಧರನ್, ಶೇನ್ ವಾರ್ನ್ ಮತ್ತು ಅನಿಲ್ ಕುಂಬ್ಳೆ ಬಳಿಕದ ಸ್ಥಾನದಲ್ಲಿ ಆ್ಯಂಡರ್ಸನ್ ಇದ್ದಾರೆ. ಆ್ಯಂಡರ್ಸನ್ 154 ಟೆಸ್ಟ್ ಗಳಲ್ಲಿ 690 ವಿಕೆಟ್‌ಗಳನ್ನು ಪಡೆದಿದ್ದಾರೆ. ಇಂಗ್ಲೆಂಡ್‌ನ ವೇಗದ ಬೌಲಿಂಗ್ ವಿಭಾಗವು ಹಿಂದೆಂದಿಗಿಂತಲೂ ಹೆಚ್ಚಿನ ಪ್ರತಿಭೆಗಳನ್ನು ಹೊಂದಿದೆ.

‘‘ನನ್ನ ವೃತ್ತಿಜೀವನದುದ್ದಕ್ಕೂ ನಾನು ಉತ್ತಮವಾಗಿ ಕೆಲಸ ಮಾಡಿದ್ದೇನೆಂದರೆ ಅದು ಆಟದೊಂದಿಗೆ ಬರುವ ಒತ್ತಡವನ್ನು ಎದುರಿಸುವುದು, ಅದು ನಿರೀಕ್ಷೆಯ ಒತ್ತಡ ಅಥವಾ ಪಂದ್ಯದ ಪರಿಸ್ಥಿತಿಯ ಒತ್ತಡ’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News