ಬಾಂಗ್ಲಾದ ಮಾಜಿ ಸ್ಪಿನ್ನರ್ ಮೊಶ್ರಾಫ್‌ ಹುಸೈನ್‌ಗೆ ಕೊರೋನ ಸೋಂಕು

Update: 2020-08-11 05:49 GMT

ಢಾಕಾ, ಆ.10: ಬಾಂಗ್ಲಾದೇಶದ ಮಾಜಿ ಎಡಗೈ ಸ್ಪಿನ್ನರ್ ಮೊಶ್ರಾಫ್‌ ಹುಸೈನ್ ಕೋವಿಡ್-19 ಟೆಸ್ಟ್‌ನಲ್ಲಿ ಪಾಸಿಟಿವ್ ವರದಿ ಬಂದಿದೆ.

ಬಾಂಗ್ಲಾದೇಶದ ಪರ ಐದು ಏಕದಿನ ಪಂದ್ಯಗಳಲ್ಲಿ ಆಡಿದ್ದ 38 ರ ಹರೆಯದ ಹುಸೈನ್ ಮಿದುಳಿನ ಗಡ್ಡೆಯ ಶಸ್ತ್ರಚಿಕಿತ್ಸೆಯ ಸಹಿತ ನಾಲ್ಕು ತಿಂಗಳ ಚಿಕಿತ್ಸೆಗೆ ಒಳಗಾಗಿದ್ದರು. ಹುಸೈನ್‌ಗೆ ಅವರ ತಂದೆಯ ಸಂಪರ್ಕದಿಂದ ಕೊರೋನ ವೈರಸ್ ತಗಲಿದೆ. ಅವರ ತಂದೆಗೆ ಕೊರೋನ ವೈರಸ್ ತಗಲಿತ್ತು. ರವಿವಾರ ಕೋವಿಡ್-19 ಪರೀಕ್ಷೆಯ ಫಲಿತಾಂಶ ಪಡೆದಿದ್ದ ಹುಸೈನ್ ತಮ್ಮ ಮನೆಯಲ್ಲಿ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

‘‘ನನ್ನ ತಂದೆಗೆ ಈ ಹಿಂದೆ ಕೋವಿಡ್-19 ಸೋಂಕು ತಗಲಿತ್ತು. ಅವರು ಸಿಎಂಎಚ್ ಆಸ್ಪತ್ರೆಯ ಐಸಿಯುನಲ್ಲಿ ದಾಖಲಾಗಿದ್ದರು. ಆನಂತರ ನನಗೂ ಸೋಂಕಿನ ಲಕ್ಷಣ ಕಾಣಿಸಿಕೊಂಡಿತ್ತು. ಕೊರೋನ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದೆ. ಈಗ ನನ್ನ ಆರೋಗ್ಯ ಚೆನ್ನಾಗಿದೆ. ಮನೆಯಲ್ಲಿ ಸ್ವಯಂ ಐಸೋಲೇಶನ್‌ನಲ್ಲಿದ್ದೇನೆ. ನನ್ನ ಪತ್ನಿ ಹಾಗೂ ಮಗುವಿಗೆ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದೆ. ಪತ್ನಿ ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದಾಳೆ’’ ಎಂದು ಹುಸೈನ್ ಹೇಳಿದ್ದಾರೆ.

ಹುಸೈನ್ ಅನಾರೋಗ್ಯದಿಂದ ಚೇತರಿಸಿಕೊಂಡ ಬಳಿಕ ಈ ವರ್ಷ ದೇಶೀಯ ಕ್ರಿಕೆಟ್‌ಗೆ ವಾಪಸಾಗಿದ್ದರು. ಬಾಂಗ್ಲಾದೇಶದ ಮಾಜಿ ನಾಯಕ ಮಶ್ರಾಫ್ ಮೊರ್ತಝಾ ಹಾಗೂ ಇತರ ಇಬ್ಬರು ಬಾಂಗ್ಲಾ ಕ್ರಿಕೆಟಿಗರಾದ ನಝ್ಮುಲ್ ಇಸ್ಲಾಂ ಹಾಗೂ ನಫೀಝ್ ಇಕ್ಬಾಲ್‌ಗೆ ಜೂನ್‌ನಲ್ಲಿ ಕೊರೋನ ವೈರಸ್ ಇರುವುದು ದೃಢಪಟ್ಟಿತ್ತು.
ಕಳೆದ ವಾರ ಬಾಂಗ್ಲಾದೇಶ ಫುಟ್ಬಾಲ್ ತಂಡದ 18 ಆಟಗಾರರಿಗೆ ಕೋವಿಡ್-19 ಇರುವುದು ಖಚಿತವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News