ಕೊರೋನಾಗೆ ಪರಿಣಾಮಕಾರಿ ಔಷಧಿ ಪತ್ತೆ: ಅಮೆರಿಕದ ವಿಜ್ಞಾನಿಗಳ ಘೋಷಣೆ

Update: 2020-08-15 16:23 GMT

ವಾಶಿಂಗ್ಟನ್,ಆ.15:ಮಾನಸಿಕ ಖಿನ್ನತೆ, ಕಿವುಡುತನ ಸೇರಿದಂತೆ ವಿವಿಧ ಕಾಯಿಲೆಗಳ ಚಿಕಿತ್ಸೆಗೆ ಬಳಸಲಾಗುತ್ತಿರುವ ಔಷಧಿಯೊಂದು ಮಾರಣಾಂತಿಕ ಕೊರೋನ ವೈರಸ್, ಮಾನವರ ಜೀವಕೋಶಗಳಲ್ಲಿ ವೃದ್ಧಿಯಾಗುವುದನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆಯೆಂದು ಅಮೆರಿಕದ ವಿಜ್ಞಾನಿಗಳ ತಂಡವೊಂದು ಶನಿವಾರ ಘೋಷಿಸಿದೆ.

 ಅತ್ಯಾಧುನಿಕ ಕಂಪ್ಯೂಟರ್‌ಗಳನ್ನು ತಮ್ಮ ಸಂಶೋಧನೆಗೆ ಬಳಸಿಕೊಂಡಿರುವ ವಿಜ್ಞಾನಿಗಳು ಈ ಔಷಧಿಯು ಕೊರೋನ ಚಿಕಿತ್ಸೆಗೆ ಅತ್ಯಂತ ಪರಿಣಾಮಕಾರಿಯೆಂಬುದನ್ನು ಪತ್ತೆ ಹಚ್ಚಿದ್ದಾರೆ.

    ಈ ಕುರಿತ ಸಂಶೋಧನಾ ವರದಿಯೊಂದು ‘ಸಯನ್ಸ್ ಅಡ್ವಾನ್ಸಸ್’ ನಿಯತ ಕಾಲಿಕದಲ್ಲಿ ಪ್ರಕಟವಾಗಿದೆ. ಕೊರೋನ ವೈರಸ್‌ನ ಜೀವನಚಕ್ರದಲ್ಲಿ ಪ್ರಮುಖ ಪಾತ್ರವಹಿಸುವ ಮಾಲೆಕ್ಯೂಲ್ ಮೈನ್ ಪ್ರೊಟ್ಯೂಸ್ (ಎಂಪ್ರೊ ) ಎಂಬ ಕಿಣ್ವ (ಎನ್‌ಝೈಮ್)ದ ಕುರಿತು ವಿಸ್ತೃತ ಅಧ್ಯಯನ ನಡೆಸಿದ ಬಳಿಕ ವಿಜ್ಞಾನಿಗಳು ಈ ಅಭಿಪ್ರಾಯಕ್ಕೆ ಬಂದಿದ್ದಾರೆ.

 ಎಬ್‌ಸೆಲೆನಾ ಎಂಬ ಹೆಸರಿನ ಈ ಔಷಧಿಯು ಕೊರೋನ ವೈರಸ್‌ನ ಎಂಪ್ರೊ ಕಿಣ್ವದ ವಿರುದ್ಧ ಪರಿಣಾಮಕಾರಿಯಾದ ಅಸ್ತ್ರವಾಗುವ ಆಶಾವಾದವನ್ನು ಮೂಡಿಸಿದೆ. ಈ ಔಷಧಿಯು ವೈರಾಣು ನಿರೋಧಕ, ಉರಿಯೂತ ನಾಶಕ, ಬ್ಯಾಕ್ಟ್ರೀರಿಯ ನಾಶಕ, ಹಾಗೂ ಜೀವಕೋಶ ರಕ್ಷಣೆಗೆ ಪೂರಕವಾದ ಅಂಶಗಳನ್ನು ಹೊಂದಿರುವುದಾಗಿ ಸಂಶೋಧನೆಯ ನೇತೃತ್ವ ವಹಿಸಿರುವ ಚಿಕಾಗೋ ವಿಶ್ವವಿದ್ಯಾನಿಲಯದ ಜುವಾನ್ ದ ಪ್ಯಾಬ್ಲೊ ತಿಳಿಸಿದ್ದಾರೆ.

          ಈ ಸಂಶೋಧನೆಯಲ್ಲಿ ದ ಪ್ಯಾಬ್ಲೊ ಮತ್ತವರ ತಂಡವು ಎಂಪ್ರೊ ಕಿಣ್ವ ಹಾಗೂ ಎಬ್‌ಸೆಲೆನ್ ಔಷಧಿಯ ವಿಸ್ತೃತ ಮಾದರಿಗಳನ್ನು ಅಭಿವೃದ್ಧಿಪಡಿಸಿ, ಅವುಗಳನ್ನು ಸೂಪರ್‌ಕಂಪ್ಯೂಟರ್‌ನಲ್ಲಿ ವಿಶ್ಲೇಷಿಸಿದ್ದರು. ಎಂಪ್ರೊ ಕಿಣ್ವದ ಚಟುವಟಿಕೆಗಳನ್ನು ಕುಗ್ಗಿಸುವ ಸಾಮರ್ಥ್ಯವನ್ನು ಎಬ್‌ಸೆಲೆನ್ ಹೊಂದಿರುವುದು ಕಂಪ್ಯೂಟರ್ ವಿಶ್ಲೇಷಣೆಯಿಂದ ತಿಳಿದುಬಂದಿರುವುದಾಗಿ ಅವರು ಹೇಳಿದ್ದಾರೆ.

ಆದಾಗ್ಯೂ ಕೋವಿಡ್-19 ವಿರುದ್ಧ ಈ ಔಷಧಿಯನ್ನು ಬಳಸಲು ಇನ್ನೂ ಹೆಚ್ಚಿನ ಅಧ್ಯಯನದ ಅಗತ್ಯವಿದೆಯೆಂದು ಸಂಶೋಧಕ ತಂಡವು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News