ಭಾರತದ ಮಾಜಿ ಕ್ರಿಕೆಟಿಗ, ಉತ್ತರ ಪ್ರದೇಶದ ಸಚಿವ ಚೇತನ್ ಚೌಹಾಣ್ ನಿಧನ
Update: 2020-08-16 18:08 IST
ಗುರುಗ್ರಾಮ, ಆ.16: ಭಾರತದ ಮಾಜಿ ಕ್ರಿಕೆಟಿಗ ಹಾಗೂ ಉತ್ತರಪ್ರದೇಶ ಸರಕಾರದ ಸಂಪುಟ ಸಚಿವ ಚೇತನ್ ಚೌಹಾಣ್ ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ರವಿವಾರ ಇಲ್ಲಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು.
ಜುಲೈನಲ್ಲಿ ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚೌಹಾಣ್ ಅವರ ಆರೋಗ್ಯ ಸ್ಥಿತಿಯು ಬಿಗಡಾಯಿಸಿದ ಪರಿಣಾಮ ಕೃತಕ ಉಸಿರಾಟದ ವ್ಯವಸ್ಥೆಯಲ್ಲಿದ್ದರು.
ಆರಂಭದಲ್ಲಿ ಲಕ್ನೊದ ಎಸ್‌ಜಿಪಿಜಿಐ ಆಸ್ಪತ್ರೆಗೆ ದಾಖಲಾಗಿದ್ದ ಚೌಹಾಣ್ ಹೆಚ್ಚಿನ ಚಿಕಿತ್ಸೆಗಾಗಿ ಗುರುಗ್ರಾಮದ ಮೆದಾಂತ ಆಸ್ಪತ್ರೆಗೆ ದಾಖಲಾಗಿದ್ದರು. ಶನಿವಾರ ಕಿಡ್ನಿ ವೈಫಲಕ್ಕೆ ಒಳಗಾದ ಬಳಿಕ ಬಹು ಅಂಗಾಂಗ ವೈಫಲ್ಯಕ್ಕೀಡಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದರು.
ಭಾರತದ ಮಾಜಿ ಆರಂಭಿಕ ಕ್ರಿಕೆಟಿಗನಾಗಿದ್ದ ಅವರು 40 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.