ನೀವು ನೀಡಿದ ಕೊಡುಗೆಗಳಿಗೆ ನಾವು ಸದಾ ಋಣಿ: ಧೋನಿಗೆ ಪತ್ರ ಬರೆದ ಪ್ರಧಾನಿ ಮೋದಿ

Update: 2020-08-20 14:57 GMT

ಹೊಸದಿಲ್ಲಿ: ಅಂತಾರಾಷ್ಟ್ರೀಯ ಕ್ರಿಕೆಟ್‍ ಗೆ ನಿವೃತ್ತಿ ಘೋಷಿಸಿದ ಮಹೇಂದ್ರ ಸಿಂಗ್ ಧೋನಿ ಅವರು ಕ್ರಿಕೆಟ್ ರಂಗಕ್ಕೆ ನೀಡಿದ ಕೊಡುಗೆಯನ್ನು ಕೊಂಡಾಡಿ ಪ್ರಧಾನಿ ನರೇಂದ್ರ ಮೋದಿ ಪತ್ರವೊಂದನ್ನು ಬರೆದಿದ್ದಾರೆ.

“ಕಳೆದ ಒಂದೂವರೆ ದಶಕದಲ್ಲಿ ಭಾರತೀಯ ಕ್ರಿಕೆಟ್‍ ಗೆ ನೀವು ನೀಡಿರುವ ಕೊಡುಗೆಗಳಿಗೆ ಸದಾ ಖಣಿಯಾಗಿರುತ್ತೇವೆ” ಎಂದು ಪ್ರಧಾನಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಧೋನಿಯ 16 ವರ್ಷಗಳ ಕ್ರಿಕೆಟ್ ಪಯಣವನ್ನು ನೆನಪಿಸಿಕೊಂಡ ಮೋದಿ “ಜಗತ್ತಿನ ಮಹಾನ್ ಬ್ಯಾಟ್ಸ್‍ಮೆನ್‍ ಗಳಲ್ಲೊಬ್ಬರಾಗಿ ಒಬ್ಬ ಅಪ್ರತಿಮ ಕಪ್ತಾನನಾಗಿ ಹಾಗೂ ಖಂಡಿತವಾಗಿಯೂ ಕ್ರಿಕೆಟ್ ಕಂಡ ಒಂದು ಅತ್ಯುತ್ತಮ ವಿಕೆಟ್ ಕೀಪರ್ ಆಗಿ ನಿಮ್ಮ ಹೆಸರು ಇತಿಹಾಸದಲ್ಲಿ ಸದಾ ಉಳಿಯುತ್ತದೆ” ಎಂದು ಪ್ರಧಾನಿ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

“ನೀವು ಜಯ ಅಥವಾ ಸೋಲಿನ ಸಂದರ್ಭದಲ್ಲೂ ಸದಾ ಶಾಂತಚಿತ್ತರಾಗಿರುತ್ತಿದ್ದೀರಿ. ಕುಟುಂಬದ ಹೆಸರು ಯುವಜನರ ಭವಿಷ್ಯ ನಿರ್ಧರಿಸದೆ ಅವರ ಸ್ವಂತ ಹೆಸರು ಅವರ ಭವಿಷ್ಯವನ್ನು ನಿರ್ಧರಿಸುವ ನ್ಯೂ ಇಂಡಿಯಾದ ಪ್ರತೀಕ ನೀವಾಗಿದ್ದೀರಿ'' ಎಂದು ಪ್ರಧಾನಿ ಬರೆದಿದ್ದಾರೆ.

ಪ್ರಧಾನಿಯ ಪತ್ರ ಪಡೆದ ನಂತರ ಅವರಿಗೆ ಧನ್ಯವಾದ ತಿಳಿಸಿ ಧೋನಿ ಟ್ವೀಟ್ ಮಾಡಿದ್ದಾರೆ. “ಒಬ್ಬ ಕಲಾವಿದ, ಸೈನಿಕ ಹಾಗೂ ಕ್ರೀಡಾಳು ಪ್ರಶಂಸೆಗೆ ಹಾತೊರೆಯುತ್ತಾರೆ, ಅವರ ಕಠಿಣ ಶ್ರಮ, ತ್ಯಾಗವನ್ನು ಎಲ್ಲರೂ ಗಮನಿಸಿ ಶ್ಲಾಘಿಸಬೇಕು ಹಾಗೂ ಗುರುತಿಸಬೇಕೆಂದು ಬಯಸುತ್ತಾರೆ. ನಿಮ್ಮ ಹಾರೈಕೆಗೆ ಧನ್ಯವಾದಗಳು'' ಎಂದು ಧೋನಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News