ಸಚಿನ್, ಕೊಹ್ಲಿಗೆ ಬ್ಯಾಟ್ ಕೊಟ್ಟ ಅಶ್ರಫ್ ಭಾಯ್ ಸಂಕಷ್ಟದಲ್ಲಿ.. !
ಮುಂಬೈ , ಆ.21: ಕ್ರೀಡಾ ಸಾಮಗ್ರಿಗಳ ಮಾರಾಟಗಾರ ಮುಂಬೈನ ಅಶ್ರಫ್ ಭಾಯ್ ಅರೋಗ್ಯ ಸಮಸ್ಯೆ ಮತ್ತು ಹಣಕಾಸಿನ ಬಿಕ್ಕಟ್ಟಿನಿಂದ ಸಂಕಷ್ಟದಲ್ಲಿದ್ದಾರೆ.
ಭಾರತದ ಮಾಸ್ಟರ್ ಬ್ಯಾಟ್ಸ್‌ಮನ್ ಸಚಿನ್ ತೆಂಡುಲ್ಕರ್, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ , ಆಸ್ಟ್ರೇಲಿಯದ ನಾಯಕ ಸ್ಟೀವ್ ಸ್ಮಿತ್, ದಕ್ಷಿಣ ಆಫ್ರಿಕದ ಎಫ್ ಡು ಪ್ಲೆಸಿಸ್ ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಮತ್ತು ಕೀರನ್ ಪೊಲಾರ್ಡ್ ಭರ್ಜರಿ ಬ್ಯಾಟಿಂಗ್ ಮಾಡಿದ್ದು , ಸಿಕ್ಸರ್ ಎತ್ತಿದ್ದು ಅಶ್ರಫ್ ನೀಡಿರುವ ಬ್ಯಾಟ್‌ನಿಂದಲೇ. ಎಲ್ಲರಿಗೂ ಅವರಿಗೆ ಬೇಕಾದ ರೀತಿಯ ಬ್ಯಾಟ್ ತಯಾರಿಸಿ ಕೊಡುತ್ತಿದ್ದರು. ಮೆಟ್ರೊ ಸಿನೆಮಾದ ಎದುರಿನ ಕ್ರೀಡಾ ಸಾಮಗ್ರಿಗಳ ಅಂಗಡಿಯನ್ನು ಹೊಂದಿರುವ ಅಶ್ರಫ್ ಚೌಧರಿ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಅಂತರ್‌ರಾಷ್ಟ್ರೀಯ ಅಥವಾ ಐಪಿಎಲ್ ಪಂದ್ಯಗಳು ನಡೆಯುವ ವೇಳೆಗೆ ನಿರಂತರವಾಗಿ ಇರುತ್ತಿದ್ದರು. ಖಾಯಂ ಆಗಿ ಕ್ರಿಕೆಟಿಗರಿಗೆ ಬ್ಯಾಟ್ ಪೂರೈಸುತ್ತಿದ್ದರು.
ಕಳೆದ ಕೆಲವು ವಾರಗಳಿಂದ ಅಶ್ರಫ್ ಆರೋಗ್ಯ ಸಮಸ್ಯೆಗಳೊಂದಿಗೆ ಮುಂಬೈನ ಉಪನಗರ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಅಶ್ರಫ್ ಚೌಧರಿ ಇದೀಗ ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿದ್ದಾರೆ.
ಕಳೆದ 15 ವರ್ಷಗಳಿಂದ ಅವರನ್ನು ಬಲ್ಲ ಹಿತೈಷಿ ಪ್ರಶಾಂತ್ ಜೆಠ್ಮಲಾನಿ ಅವರು ಚಿಕಿತ್ಸೆಗಾಗಿ ಹಣವನ್ನು ಸಂಗ್ರಹಿಸಲು ಸಹಾಯ ಮಾಡುತ್ತಿದ್ದಾರೆ.
ಆಶ್ರಫ್ ಆರೋಗ್ಯ ಸ್ಥಿತಿ ಚೆನ್ನಾಗಿಲ್ಲ. ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಅಶ್ರಫ್ ಇನ್ನೂ ಚೇತರಿಸಿಕೊಂಡಿಲ್ಲ. ಲಾಕ್‌ಡೌನ್ ಕಾರಣದಿಂದಾಗಿ ನಗರದಲ್ಲಿ ಕ್ರಿಕೆಟ್ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿರುವುದರಿಂದ ಅವರ ವ್ಯವಹಾರಕ್ಕೂ ದೊಡ್ಡ ಪೆಟ್ಟು ಬಿದ್ದಿದೆ. ಅವರ ಕೈಯಲ್ಲಿ ಹಣವಿಲ್ಲ. ಎಲ್ಲವೂ ಖಾಲಿಯಾಗಿದೆ ಎಂದು ಜೇಠ್ಮಲಾನಿ ಹೇಳಿದ್ದಾರೆ. ‘‘ನಾವು ಎರಡು ಲಕ್ಷ ರೂ.ಗಳನ್ನು ನೀಡಿದ್ದೇವೆ. ಇನ್ನೂ ಹೆಚ್ಚಿನ ಹಣದ ಅಗತ್ಯವಿದೆ. ಮುಂದಿನ ದಿನಗಳಲ್ಲಿ ನಾವು ಅವರಿಗೆ ಹೆಚ್ಚಿನ ಹಣವನ್ನು ಸಂಗ್ರಹಿಸಲು ಬಯಸುತ್ತೇವೆ, ’’ಎಂದು ಅವರು ಹೇಳುತ್ತಾರೆ.
1920ರಿಂದ ಕಾರ್ಯಾಚರಿಸುತ್ತಿರುವ ಅವರ ಕುಟುಂಬಕ್ಕೆ ಸೇರಿದ ಎಂ. ಅಶ್ರಫ್ ಬ್ರದರ್ಸ್ ಚಿಕ್ಕ ಅಂಗಡಿಗೆ ಲಾಕ್‌ಡೌನ್ ಧಕ್ಕೆ ತಂದಿದೆ. ಅಲ್ಲಿರುವ ಉದ್ಯೋಗಿಗಳು ತಮ್ಮ ಊರಿಗೆ ವಾಪಸಾಗಿದ್ದಾರೆ. ಎರಡು ತಿಂಗಳ ಹಿಂದೆ ಅಶ್ರಫ್ ಚೌಧರಿ ಅಣ್ಣ ನಿಧನರಾದರು. ಆ ಬಳಿಕ ಅಶ್ರಫ್ ಕುಟುಂಬ ಇನ್ನಷ್ಟು ಸಮಸ್ಯೆಗೆ ಸಿಲುಕಿತು. ವಾಸ್ತವವಾಗಿ ಅಶ್ರಫ್ ಕೆಲವು ಆಟಗಾರರಿಗೆ ಒಂದು ಪೈಸೆಯನ್ನೂ ಪಡೆಯದೆ ಸಹಾಯ ಮಾಡಿದ್ದಾರೆ. 2016ರಲ್ಲಿ ವೆಸ್ಟ್ ಇಂಡೀಸ್ ಮುಂಬೈನಲ್ಲಿ ಟ್ವೆಂಟಿ-20ವಿಶ್ವಕಪ್ ಪಂದ್ಯವನ್ನು ಆಡಿದಾಗ ಅಶ್ರಫ್ ಇಡೀ ತಂಡಕ್ಕೆ 16 ಬ್ಯಾಟ್‌ಗಳ ಕೊಡುಗೆ ನೀಡಿದ್ದರು. ವೆಸ್ಟ್ ಇಂಡೀಸ್ ಆಟಗಾರರು ಮತ್ತು ಅವರ ಕ್ರಿಕೆಟ್ ಮಂಡಳಿಯೊಂದಿಗೆ ವೇತನ ಪಾವತಿಯ ವಿಚಾರದಲ್ಲಿ ಸಮಸ್ಯೆ ಇದೆ ಎಂಬ ವಿಷಯ ಅರಿತ ಅಶ್ರಫ್ ಬ್ಯಾಟ್‌ಗಳನ್ನು ಪುಕ್ಕಟೆಯಾಗಿ ನಿಡಿದ್ದರು.
‘‘ಇತ್ತೀಚಿನ ದಿನಗಳಲ್ಲಿ ಯಾರೂ ಬ್ಯಾಟ್‌ಗಳನ್ನು ಕೇಳುತ್ತಿಲ್ಲ. ಐಪಿಎಲ್ ವಿದೇಶದಲ್ಲಿ ನಡೆಯುತ್ತಿರುವುದರಿಂದ ಅಶ್ರಫ್‌ಗೆ ಯಾವುದೇ ಕೆಲಸ ಇರುವುದಿಲ್ಲ.ಬೇಸರದ ಸಂಗತಿಯೆಂದರೆ ಕ್ರೀಡಾ ಕಿಟ್‌ಗಳನ್ನು ಪಡೆದು ಹಣ ನೀಡದೆ ಹಲವು ಮಂದಿ ಆಟಗಾರರು ಬಾಕಿ ಉಳಿಸಿಕೊಂಡಿದ್ದಾರೆ. ಆದರೆ ಅಶ್ರಫ್ ಇಲ್ಲಿಯವರೆಗೆ ಅವರಿಂದ ಹಣ ಕೇಳಿಲ್ಲ ’’ಎಂದು ಜೆಠ್ಮ್‌ಲಾನಿ ಹೇಳಿದರು.
ಪ್ರಶಾಂತ್ ಹೇಳುವಂತೆ, ಕ್ರಿಕೆಟಿಗರು ಈಗ ಅವರಿಗೆ ಸಹಾಯ ಮಾಡಬೇಕಿದೆ.