ಟ್ರಂಪ್ ಅವಧಿಯ ‘ಕತ್ತಲೆ’ಯನ್ನು ಕೊನೆಗೊಳಿಸುವೆ: ಜೋ ಬೈಡನ್ ಘೋಷಣೆ

Update: 2020-08-21 17:35 GMT

ವಿಲ್ಮಿಂಗ್ಟನ್ (ಅಮೆರಿಕ), ಆ. 21: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ತನ್ನನ್ನು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಮಾಡಿರುವ ನೇಮಕವನ್ನು ಜೋ ಬೈಡನ್ ಗುರುವಾರ ಸ್ವೀಕರಿಸಿದ್ದಾರೆ ಹಾಗೂ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಆಡಳಿತಾವಧಿಯಲ್ಲಿ ಸೃಷ್ಟಿಯಾಗಿರುವ ‘ಕತ್ತಲೆ’ಯನ್ನು ಕೊನೆಗೊಳಿಸುವ ಭರವಸೆಯನ್ನು ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಏಕತೆಗಾಗಿ ಮನವಿ ಮಾಡಿದ್ದಾರೆ ಹಾಗೂ ಆಶಾವಾದಿಯಾಗಿರುವಂತೆ ಜನರಿಗೆ ಕರೆ ನೀಡಿದ್ದಾರೆ.

‘‘ಹಾಲಿ ಅಧ್ಯಕ್ಷರು ಅಮೆರಿಕವನ್ನು ಸುದೀರ್ಘ ಅವಧಿಯಿಂದ ಕತ್ತಲೆಯಲ್ಲಿ ಇಟ್ಟಿದ್ದಾರೆ. ಇಲ್ಲಿ ತುಂಬಾ ಆಕ್ರೋಶ, ತುಂಬಾ ಭೀತಿ ಮತ್ತು ತುಂಬಾ ವಿಭಜನೆಯಿದೆ’’ ಎಂದು ಬೈಡನ್ ಹೇಳಿದರು.

‘‘ನೀವು ಅಧ್ಯಕ್ಷ ಪದವಿಯನ್ನು ನನಗೆ ವಹಿಸಿದರೆ, ನಾನು ನಮಗೆ ಶ್ರೇಷ್ಠವಾದುದನ್ನು ತರುತ್ತೇನೆ, ಕೆಟ್ಟದ್ದನ್ನಲ್ಲ. ನಾನು ಬೆಳಕಿನ ಸಂಗಾತಿಯಾಗಿರುತ್ತೇನೆ, ಕತ್ತಲೆಯದ್ದಲ್ಲ’’ ಎಂದು ಬೈಡನ್ ಹೇಳಿದರು.

‘‘ಇದು ನಾವು ಅಮೆರಿಕದ ಜನರು ಒಗ್ಗಟ್ಟಾಗುವ ಸಮಯ’’ ಎಂದು ಡೆಲವೇರ್ ರಾಜ್ಯದ ತನ್ನ ಊರು ವಿಲ್ಮಿಂಗ್ಟನ್‌ನಲ್ಲಿ ವೀಡಿಯೊ ಲಿಂಕ್ ಮೂಲಕ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News