ಧೋನಿಯನ್ನು ಬಿಸಿಸಿಐ ಸರಿಯಾಗಿ ನಡೆಸಿಕೊಂಡಿಲ್ಲ: ಸಕ್ಲೇನ್ ಮುಷ್ತಾಕ್
ಹೊಸದಿಲ್ಲಿ, ಆ.23: ಎಂಎಸ್ ಧೋನಿ ವಿದಾಯದ ಪಂದ್ಯವನ್ನಾಡದೇ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದು, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಅವರನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂದು ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಕ್ಲೇನ್ ಮುಷ್ತಾಕ್ ಹೇಳಿದ್ದಾರೆ.
ಪ್ರತಿಯೊಬ್ಬ ಕ್ರಿಕೆಟಿಗನೂ ಕೊನೆಯ ಪಂದ್ಯವನ್ನಾಡಿ ನಿವೃತ್ತಿಯಾಗಬೇಕೆಂಬ ಕನಸು ಕಾಣುತ್ತಿರುತ್ತಾರೆ. ಧೋನಿ ಕೂಡ ಇದಕ್ಕೆ ಹೊರತಾಗಿರಲಾರರು. ಕ್ರಿಕೆಟ್ ಅಭಿಮಾನಿಗಳು ಕೂಡ ಧೋನಿಯನ್ನು ಕೊನೆಯ ಬಾರಿ ಭಾರತದ ಜರ್ಸಿಯಲ್ಲಿ ಮೈದಾನದಲ್ಲಿ ನೋಡಬೇಕೆಂಬ ಬಯಕೆ ಹೊಂದಿರುತ್ತಾರೆ ಎಂದು ಮುಷ್ತಾಕ್ ಹೇಳಿದ್ದಾರೆ.
ಧೋನಿ ಆಗಸ್ಟ್ 15 ರಂದು ಇನ್‌ಸ್ಟಾಗ್ರಾಮ್‌ನ ಮೂಲಕ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ದಿಢೀರ್ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದರು. 2019ರಲ್ಲಿ ನಡೆದಿದ್ದ ನ್ಯೂಝಿಲ್ಯಾಂಡ್ ವಿರುದ್ಧದ ಸೆಮಿ ಫೈನಲ್ ಧೋನಿ ಆಡಿರುವ ಕೊನೆಯ ಪಂದ್ಯವಾಗಿತ್ತು.
"ಧೋನಿಯನ್ನು ಇಷ್ಟಪಡುವ ಪ್ರತಿಯೊಬ್ಬರಲ್ಲೂ ಒಂದು ದೂರು ಇರುತ್ತದೆ ಎಂದು ನಾನು ಭಾವಿಸುತ್ತೇನೆ.ಅವರು ಭಾರತದ ಕಿಟ್ ಧರಿಸಿದ್ದರೆ,ಕೈಗವಸುಗಳೊಂದಿಗೆ ಬ್ಯಾಟ್ ಹಿಡಿದಿದ್ದರೆ, ಕೈಗವಸು ಹಾಗೂ ಕ್ಯಾಪ್‌ನ್ನು ಕೊನೆಯ ಬಾರಿ ಗೌರವದಿಂದ ತೆಗೆದಿದ್ದರೆ ತುಂಬಾ ಚೆನ್ನಾಗಿರುತ್ತಿತ್ತು. ನನ್ನ ಕಾರ್ಯಕ್ರಮದಲ್ಲಿ ಸಾಮಾನ್ಯವಾಗಿ ನೆಗೆಟಿವ್ ವಿಚಾರ ಹೇಳುವುದಿಲ್ಲ. ನನ್ನ ಮನಸ್ಸಿನಲ್ಲಿ ಈ ವಿಚಾರ ಬಂತು. ಇದನ್ನು ಅದುಮಿಟ್ಟುಕೊಳ್ಳಬೇಕೆಂದು ಪ್ರಯತ್ನಿಸಿದ್ದೆ. ಆದರೆ, ಇದನ್ನು ನೀವುಹೇಳಲೇಬೇಕೆಂದು ನನ್ನ ಹೃದಯ ಹೇಳಿತ್ತು. ಇಂತಹ ದೊಡ್ಡ ಆಟಗಾರನನ್ನು ಸರಿಯಾಗಿ ನಡೆಸಿಕೊಳ್ಳದ ಬಿಸಿಸಿಐ ನಷ್ಟ ಅನುಭವಿಸಿದೆ . ಬಿಸಿಸಿಐ ಧೋನಿಯನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂದು ವಿಚಾರವನ್ನು ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಒಪ್ಪಿಕೊಳ್ಳುತ್ತಾರೆ. ಧೋನಿಯಂತಹ ಆಟಗಾರ ಈ ರೀತಿ ನಿವೃತ್ತಿಯಾಗಿರುವುದು ನನಗೆ ತುಂಬಾ ನೋವು ತಂದಿದೆ''ಎಂದು ಯೂ ಟ್ಯೂಬ್ ಚಾನಲ್‌ನಲ್ಲಿ ಮುಷ್ತಾಕ್ ಹೇಳಿದ್ದಾರೆ.