ಐಸಿಸಿ ಹಾಲ್ ಆಫ್ ಫೇಮ್ ಗೆ ಜಾಕ್ ಕಾಲಿಸ್, ಝಹೀರ್ ಅಬ್ಬಾಸ್, ಲಿಸಾ ಸ್ಥಳೇಕರ್ ಸೇರ್ಪಡೆ
ದುಬೈ, ಆ.23: ದಕ್ಷಿಣ ಆಫ್ರಿಕಾದ ಲೆಜೆಂಡರಿ ಆಲ್‌ರೌಂಡರ್ ಜಾಕಸ್ ಕಾಲಿಸ್, ಪಾಕಿಸ್ತಾನದ ಬ್ಯಾಟಿಂಗ್ ದಿಗ್ಗಜ ಝಹೀರ್ ಅಬ್ಬಾಸ್ ಹಾಗೂ ಪುಣೆ ಮೂಲದ ಆಸ್ಟ್ರೇಲಿಯ ಕ್ರಿಕೆಟ್ ತಂಡದ ಮಾಜಿ ನಾಯಕಿ ಲಿಸಾ ಸ್ಥಳೇಕರ್ ರವಿವಾರ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ(ಐಸಿಸಿ)ಹಾಲ್ ಆಫ್ ಫೇಮ್‌ಗೆ ಸೇರ್ಪಡೆಯಾಗಿದ್ದಾರೆ. ಕ್ರಿಕೆಟ್ ಕಂಡ ಶ್ರೇಷ್ಠ ಆಲ್‌ರೌಂಡರ್ ಕಾಲಿಸ್ 1995 ಹಾಗೂ 2014ರ ನಡುವೆ ದಕ್ಷಿಣ ಆಫ್ರಿಕಾದ ಪರ 166 ಟೆಸ್ಟ್, 328 ಏಕದಿನ ಹಾಗೂ 25 ಟಿ-20 ಪಂದ್ಯಗಳನ್ನು ಆಡಿದ್ದಾರೆ. 44ರ ಹರೆಯದ ಕಾಲಿಸ್ ಟೆಸ್ಟ್ ಹಾಗೂ ಏಕದಿನಗಳಲ್ಲಿ ಕ್ರಮವಾಗಿ 13,289 ಹಾಗೂ 11,579 ರನ್ ಗಳಿಸಿ ದ.ಆಫ್ರಿಕಾದ ಪರ ಗರಿಷ್ಠ ಸ್ಕೋರ್ ಕಲೆ ಹಾಕಿದ್ದಾರೆ. ಟೆಸ್ಟ್‌ನಲ್ಲಿ 292 ಹಾಗೂ ಏಕದಿನದಲ್ಲಿ 273 ವಿಕೆಟ್‌ಗಳನ್ನು ಉರುಳಿಸಿದ್ದಾರೆ.
ಕೋವಿಡ್-19 ಹಿನ್ನೆಲೆಯಲ್ಲಿ ಐಸಿಸಿ ವಾಸ್ತವಿಕವಾಗಿ ನಡೆಸಿದ್ದ ಸಮಾರಂಭದಲ್ಲಿ ಕಾಲಿಸ್ ಅವರ ದೀರ್ಘಕಾಲದ ಸಹ ಆಟಗಾರ ಶಾನ್ ಪೊಲಾಕ್ ಹಾಗೂ ಭಾರತದ ದಿಗ್ಗಜ ಸುನೀಲ್ ಗವಾಸ್ಕರ್ ಉಪಸ್ಥಿತರಿದ್ದರು.
2009ರಲ್ಲಿ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಯಾಗಿರುವ ಗವಾಸ್ಕರ್, ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ಥಳೇಕರ್‌ರನ್ನು ಶ್ಲಾಘಿಸಿದರು.
‘‘ಐಸಿಸಿ ಹಾಲ್ ಆಫ್ ಫೇಮ್‌ಗೆ ಮತ್ತೊಂದು ‘ಕರ್’ಸೇರ್ಪಡೆಯಾಗಿರುವುದು ಉತ್ತಮ ಸಂಕೇತ. ನೀವು(ಸ್ಥಾಲೇಕರ್)ಆಸ್ಟ್ರೇಲಿಯಕ್ಕೆ ಮಾತ್ರವಲ್ಲ ಭಾರತದ ಆಟಗಾರ್ತಿಯರಿಗೂ ಸ್ಫೂರ್ತಿಯಾಗಿದ್ದೀರಿ. ನೀವು ಭಾರತದಲ್ಲಿ ಜೂನಿಯರ್ ಕ್ರಿಕೆಟಿಗರು ಸೇರಿದಂತೆ ಹಲವರೊಂದಿಗೆ ಸಂವಹನ ನಡೆಸಿದ್ದೀರಿ. ಮಹಿಳೆಯರು ಅತ್ಯುತ್ತಮ ಮಟ್ಟದಲ್ಲಿ ಆಡಬಲ್ಲರು ಎನ್ನುವುದನ್ನು ನಿಮ್ಮ ಉತ್ಸಾಹದಿಂದ ತೋರಿಸಿದ್ದೀರಿ’’ ಎಂದು ಗವಾಸ್ಕರ್ ಅವರು ಸ್ಥಳೇಕರ್‌ರನ್ನು ಹೊಗಳಿದರು.
ಸ್ಥಳೇಕರ್ 8 ಟೆಸ್ಟ್, 125 ಏಕದಿನ ಹಾಗೂ 54 ಟ್ವೆಂಟಿ-20 ಪಂದ್ಯಗಳಲ್ಲಿ ಆಸ್ಟ್ರೇಲಿಯವನ್ನು ಪ್ರತಿನಿಧಿಸಿದ್ದರು.
ಸಮಾರಂಭದಲ್ಲಿ ಹಾಲ್ ಆಫ್ ಫೇಮ್‌ಗೆ ಪಾತ್ರರಾದ ಮೂರನೇ ಕ್ರಿಕೆಟಿಗ ಅಬ್ಬಾಸ್ ಪಾಕಿಸ್ತಾನದ ಪರ 78 ಟೆಸ್ಟ್ ಹಾಗೂ 62 ಏಕದಿನ ಪಂದ್ಯಗಳಲ್ಲಿ ಆಡಿದ್ದು, ಎರಡೂ ಮಾದರಿಯ ಕ್ರಿಕೆಟ್‌ನಲ್ಲಿ 40ಕ್ಕೂ ಅಧಿಕ ಸರಾಸರಿಯಲ್ಲಿ ಕ್ರಮವಾಗಿ 5,062 ಹಾಗೂ 2,572 ರನ್ ಗಳಿಸಿದ್ದಾರೆ.