9 ತಿಂಗಳ ಬಳಿಕ ಮೊದಲ ಪಂದ್ಯ ಗೆದ್ದ ಆ್ಯಂಡಿ ಮರ್ರೆ
Update: 2020-08-23 23:08 IST
ಲಂಡನ್, ಆ.23: ಮೂರು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಆ್ಯಂಡಿ ಮರ್ರೆ 9 ತಿಂಗಳ ಬಳಿಕ ಆಡಿರುವ ಮೊದಲ ಎಟಿಪಿ ಟೂರ್ನಮೆಂಟ್‌ನಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಎರಡು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾದ ಐದು ತಿಂಗಳ ಬಳಿಕ ಮರ್ರೆ ಟೂರ್ನಿಯಲ್ಲಿ ಭಾಗವಹಿಸಿದ್ದರು.
ಶನಿವಾರ ನಡೆದ ವೆಸ್ಟರ್ನ್-ಸದರ್ನ್ ಓಪನ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಮರ್ರೆ ಫ್ರಾನ್ಸ್ ನ ಟಿಫಾಯ್ ವಿರುದ್ಧ 7-6(6), 3-6, 6-1 ಸೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
‘‘ದೈಹಿಕವಾಗಿ ನಾನು ಉತ್ತಮವಾಗಿ ಪ್ರದರ್ಶನ ನೀಡಿರುವೆ. ನಾನು ನಿರೀಕ್ಷೆ ಮಾಡಿದ್ದಕ್ಕಿಂತ ಉತ್ತಮವಾಗಿ ಆಡಿದ್ದೇನೆ’’ ಎಂದು ಎರಡು ಬಾರಿ ವಿಂಬಲ್ಡನ್ ಹಾಗೂ 2012ರಲ್ಲಿ ಯು.ಎಸ್. ಓಪನ್ ಪ್ರಶಸ್ತಿ ಜಯಿಸಿರುವ ಮರ್ರೆ ಹೇಳಿದ್ದಾರೆ. ಕೊರೋನ ವೈರಸ್ ಹಾವಳಿಯಿಂದಾಗಿ ಮಾರ್ಚ್ ತಿಂಗಳಿಂದ ಎಲ್ಲ ಕ್ರೀಡಾ ಚಟುವಟಿಕೆಗಳು ಸ್ತಬ್ಧವಾಗಿವೆ. ಆಗಸ್ಟ್ 31ರಿಂದ ಯು.ಎಸ್. ಓಪನ್ ಆರಂಭದೊಂದಿಗೆ ಟೆನಿಸ್ ಟೂರ್ನಿಯು ಪುನರಾರಂಭವಾಗಲಿದೆ.