ಕ್ರೈಸ್ಟ್‌ಚರ್ಚ್ ಮಸೀದಿ ಹತ್ಯಾಕಾಂಡ: ಹಂತಕನೊಂದಿಗೆ ಸಂತ್ರಸ್ತರ ಮುಖಾಮುಖಿ

Update: 2020-08-24 16:37 GMT

ಕ್ರೈಸ್ಟ್‌ಚರ್ಚ್ (ನ್ಯೂಝಿಲ್ಯಾಂಡ್), ಆ. 24: ನ್ಯೂಝಿಲ್ಯಾಂಡ್‌ನ ಕ್ರೈಸ್ಟ್‌ಚರ್ಚ್ ನಗರದ ಮಸೀದಿಯೊಂದರಲ್ಲಿ ಕಳೆದ ವರ್ಷ 51 ಮುಸ್ಲಿಮರನ್ನು ಕೊಂದ ಆರೋಪವನ್ನು ಎದುರಿಸುತ್ತಿರುವ ವ್ಯಕ್ತಿಯನ್ನು ಘಟನೆಯ ಸಂತ್ರಸ್ತರು ಸೋಮವಾರ ತರಾಟೆಗೆ ತೆಗೆದುಕೊಂಡಾಗ ಆ ವ್ಯಕ್ತಿಯು ಯಾವುದೇ ಭಾವನೆಯನ್ನು ತೋರ್ಪಡಿಸಲಿಲ್ಲ ಎಂದು ವರದಿಯಾಗಿದೆ.

ಕ್ರೈಸ್ಟ್‌ಚರ್ಚ್ ನ್ಯಾಯಾಲಯದಲ್ಲಿ ದೋಷಿಯ ಶಿಕ್ಷೆಯ ಪ್ರಮಾಣದ ವಿಚಾರಣೆ ಆರಂಭವಾದಾಗ, ಆತನ ಪೂರ್ವಯೋಜಿತ ದಾಳಿಯ ಆಘಾತಕಾರಿ ವಿವರಗಳನ್ನು ಪ್ರಾಸಿಕ್ಯೂಟರ್‌ಗಳು ನ್ಯಾಯಾಲಯದ ಮುಂದೆ ಇಟ್ಟರು. ಆ ಭೀಕರ ದಾಳಿಯ ವೇಳೆ, ತಾನು ಗುಂಡು ಹಾರಿಸಿರುವುದಕ್ಕಿಂತಲೂ ಹೆಚ್ಚಿನ ಮಂದಿಗೆ ಗುಂಡು ಹಾರಿಸಲು ದೋಷಿ ಬ್ರೆಂಟನ್ ಟಾರಂಟ್ ಬಯಸಿದ್ದನು ಎಂದು ಅವರು ಹೇಳಿದರು.

ಆಸ್ಟ್ರೇಲಿಯನ್ ಬಂದೂಕುಧಾರಿಯು ಮೊದಲ ಬಾರಿ ಮುಖಾಮುಖಿಯಾದಾಗ, ದುಃಖತಪ್ತ ಕುಟುಂಬಗಳು ಮತ್ತು ಗಾಯಾಳುಗಳು ತಾವು ಅಂದು ಪಟ್ಟ ಪಾಡನ್ನು ಬಣ್ಣಿಸಿದರು. ಹೆಣಗಳ ಅಡಿಯಲ್ಲಿ ತಾವು ಹೇಗೆ ಅಡಗಿದೆವು, ಇನ್ನು ಕಿವಿಯಲ್ಲಿ ರಿಂಗಣಿಸುವ ಸ್ವಯಂಚಾಲಿತ ಬಂದೂಕೊಂದರ ಶಬ್ಧದೊಂದಿಗೆ ತಾವು ಹೇಗೆ ಬದುಕುವುದನ್ನು ರೂಢಿಸಿಕೊಳ್ಳಬೇಕು ಎಂಬ ಬಗ್ಗೆ ಸಂತ್ರಸ್ತರು ಮಾತನಾಡಿದರು.

 2019 ಮಾರ್ಚ್ 15ರಂದು ‘ಬಿಳಿಯರು ಶ್ರೇಷ್ಠರು’ ಎಂದು ಹೇಳುವ ಸಿದ್ಧಾಂತವನ್ನು ಅನುಸರಿಸುವ ಟಾರಟ್, ಎರಡು ಮಸೀದಿಗಳಲ್ಲಿ ಪ್ರಾರ್ಥನೆ ನಡೆಸುತ್ತಿದ್ದವರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದನು. ಮಕ್ಕಳು, ಮಹಿಳೆಯರು ಎಂದು ನೋಡದೆ ಕಣ್ಣಿಗೆ ಕಾಣಿಸಿದವರ ಮೇಲೆ ಗುಂಡು ಹಾರಿಸುತ್ತಾ ಅವನು ಸಾವಿನ ಕೇಕೆ ಹಾಕಿದ್ದನು.

ತನ್ನ ವಿರುದ್ಧದ 51 ಕೊಲೆ, 40 ಕೊಲೆಯತ್ನ ಮತ್ತು ಒಂದು ಭಯೋತ್ಪಾದನೆ ಆರೋಪಗಳನ್ನು 29 ವರ್ಷದ ಹಂತಕನು ಒಪ್ಪಿಕೊಂಡಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News