ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧದ ತಾರತಮ್ಯ ಕೊನೆಗೊಳ್ಳಬೇಕು: ವಿಶ್ವಸಂಸ್ಥೆ ಮಹಾಕಾರ್ಯದರ್ಶಿ

Update: 2020-08-24 16:43 GMT
ಫೋಟೊ ಕೃಪೆ: twitter.com

ವಿಶ್ವಸಂಸ್ಥೆ, ಆ. 24: ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧದ ತಾರತಮ್ಯ ಮತ್ತು ಅದಕ್ಕೆ ಸಂಬಂಧಿಸಿದ ದ್ವೇಷಾಪರಾಧಗಳು ಕೊನೆಗೊಳ್ಳಬೇಕೆಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಕರೆ ನೀಡಿದ್ದಾರೆ.

ಕೊರೋನ ವೈರಸ್ ಸಾಂಕ್ರಾಮಿಕಕ್ಕೆ ಜನಾಂಗೀಯವಾದಿ ಧೋರಣೆಯನ್ನು ತಳುಕು ಹಾಕುವುದು ಮತ್ತು ನಿರ್ದಿಷ್ಟ ಗುಂಪುಗಳ ಮೇಲೆ ಕಳಂಕ ಹೊರಿಸುವ ಅಭಿಯಾನಗಳೂ ನಡೆಯುತ್ತಿವೆ ಎಂದು ಅವರು ಹೇಳಿದರು.

‘‘ಧಾರ್ಮಿಕ ಸ್ವಾತಂತ್ರ್ಯದ ಅಥವಾ ನಂಬಿಕೆಯ ಹಕ್ಕು ಅಂತರ್‌ರಾಷ್ಟ್ರೀಯ ಮಾನವಹಕ್ಕುಗಳ ಕಾನೂನಿನಲ್ಲಿ ಸುಭದ್ರವಾಗಿದೆ ಹಾಗೂ ಅದು ಸರ್ವರನ್ನೊಳಗೊಂಡ, ಸಮೃದ್ಧ ಹಾಗೂ ಶಾಂತಿಯು ಸಮಾಜಗಳ ನಿರ್ಮಾಣಕ್ಕೆ ಅಡಿಪಾಯವಾಗಿದೆ’’ ಎಂದು ಅವರು ನುಡಿದರು.

ಧರ್ಮ ಅಥವಾ ನಂಬಿಕೆಯ ಆಧಾರದಲ್ಲಿ ನಡೆಯುವ ಹಿಂಸಾಕೃತ್ಯಗಳ ಸಂತ್ರಸ್ತರನ್ನು ಸ್ಮರಿಸುವ ಅಂತರ್‌ರಾಷ್ಟ್ರೀಯ ದಿನದ ಸಂದರ್ಭದಲ್ಲಿ ನೀಡಿದ ಸಂದೇಶದಲ್ಲಿ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ದಿನವನ್ನು ಆಗಸ್ಟ್ 22ರಂದು ಆಚರಿಸಲಾಗುತ್ತದೆ.

‘‘ಜಗತ್ತಿನಾದ್ಯಂತ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಆಳವಾಗಿ ಬೇರುಬಿಟ್ಟಿರುವ ತಾರತಮ್ಯವು ಮುಂದುವರಿಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಅವರ ಮೇಲಿನ ದಾಳಿಗಳು, ಅವರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿಗಳು, ದ್ವೇಷಾಪರಾಧಗಳು ಮತ್ತು ಜನರ ಧರ್ಮ ಮತ್ತು ನಂಬಿಕೆಯ ಕಾರಣಕ್ಕಾಗಿಯೇ ಅವರ ಮೇಲೆ ನಡೆಯುವ ದಾಳಿಗಳು ನಿರಂತರವಾಗಿ ಮುಂದುವರಿಯುತ್ತಿವೆ’’ ಎಂದು ಗುಟೆರಸ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News