ನವಾಲ್ನಿಗೆ ವಿಷಪ್ರಾಶನವಾಗಿರುವ ಸಾಧ್ಯತೆ ಅಧಿಕ: ಜರ್ಮನಿ

Update: 2020-08-24 17:17 GMT

ಬರ್ಲಿನ್ (ಜರ್ಮನಿ), ಆ. 24: ರಶ್ಯದ ಪ್ರತಿಪಕ್ಷ ನಾಯಕ ಅಲೆಕ್ಸೀ ನವಾಲ್ನಿಗೆ ವಿಷಪ್ರಾಶನವಾಗಿರುವ ಸಾಧ್ಯತೆ ಹೆಚ್ಚಾಗಿದೆ ಎಂದು ಜರ್ಮನಿ ಸರಕಾರ ಸೋಮವಾರ ಹೇಳಿದೆ.

 ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರ ಕಟು ಟೀಕಾಕಾರರಾಗಿರುವ 44 ವರ್ಷದ ನವಾಲ್ನಿ ಗುರುವಾರ ದಿಢೀರನೆ ತೀವ್ರ ಅಸ್ವಸ್ಥಗೊಂಡು ಪ್ರಜ್ಞಾಹೀನ ಸ್ಥಿತಿಗೆ ಜಾರಿದ್ದರು. ಅವರಿಗೆ ಸೈಬೀರಿಯದ ವಿಮಾನ ನಿಲ್ದಾಣದಲ್ಲಿ ವಿಷಮಿಶ್ರಿತ ಚಹಾ ನೀಡಲಾಗಿದೆ ಎಂಬುದಾಗಿ ಅವರ ಬೆಂಬಲಿಗರು ಆರೋಪಿಸಿದ್ದಾರೆ. ಅವರನ್ನು ಶನಿವಾರ ಮುಂಜಾನೆ ಹೆಚ್ಚಿನ ಚಿಕಿತ್ಸೆಗಾಗಿ ಜರ್ಮನಿಗೆ ವಿಮಾನ ಆ್ಯಂಬುಲೆನ್ಸ್‌ನಲ್ಲಿ ಕರೆದೊಯ್ಯಲಾಗಿದೆ.

‘‘ವಿಷಪ್ರಾಶನವಾಗಿರುವ ಸಾಧ್ಯತೆ ಹೆಚ್ಚಾಗಿರುವ ರೋಗಿಯೊಬ್ಬರಿಗೆ ನಾವು ಚಿಕಿತ್ಸೆ ನೀಡುತ್ತಿದ್ದೇವೆ’’ ಎಂದು ಜರ್ಮನಿಯ ಚಾನ್ಸಲರ್ ಆ್ಯಂಜೆಲಾ ಮರ್ಕೆಲ್‌ರ ವಕ್ತಾರ ಸ್ಟೀಫನ್ ಸೈಬರ್ಟ್ ಸುದ್ದಿಗಾರರಿಗೆ ತಿಳಿಸಿದರು.

‘‘ನವಾಲ್ನಿಗೆ ಯಾರೋ ವಿಷಪ್ರಾಶನ ಮಾಡಿದ್ದಾರೆ ಎನ್ನುವುದು ಸಂದೇಹ. ವಿಷಪ್ರಾಶನಕ್ಕೆ ಸಂಬಂಧಿಸಿದ ಉದಾಹರಣೆಗಳು ರಶ್ಯದ ಇತ್ತೀಚಿನ ಇತಿಹಾಸದಲ್ಲಿ ಹಲವಾರು ಇವೆ. ಹಾಗಾಗಿ, ಜಗತ್ತು ಈ ಸಂಶಯವನ್ನು ಗಂಭೀರವಾಗಿ ಸ್ವೀಕರಿಸುತ್ತದೆ’’ ಎಂದು ಸೈಬರ್ಟ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News