ಡೆಲ್ಲಿ ಕ್ಯಾಪಿಟಲ್ಸ್ ಗೆ ಹ್ಯಾರಿಸ್ ಬೌಲಿಂಗ್ ಕೋಚ್

Update: 2020-08-26 06:43 GMT

ಹೊಸದಿಲ್ಲಿ, ಆ.26: ಯುಎಇಯಲ್ಲಿ ನಡೆಯಲಿರುವ ಮುಂಬರುವ ಐಪಿಎಲ್ ಟ್ವೆಂಟಿ-20 ಟೂರ್ನಿಗೆ ಆಸ್ಟ್ರೇಲಿಯದ ಮಾಜಿ ವೇಗದ ಬೌಲರ್ ರ್ಯಾನ್ ಹ್ಯಾರಿಸ್‌ಡೆಲ್ಲಿ ಕ್ಯಾಪಿಟಲ್ಸ್‌ನ ಹೊಸ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ.

ಸೆಪ್ಟಂಬರ್ 19ರಿಂದ ಪ್ರಾರಂಭವಾಗುವ ಐಪಿಎಲ್‌ನ 13ನೇ ಆವೃತ್ತಿಯ ಟೂರ್ನಿಗೆ ಡೆಲ್ಲಿ ಕ್ಯಾಪಿಟಲ್ಸ್‌ನ ಕೋಚಿಂಗ್ ತಂಡವನ್ನು 40ರ ಹರೆಯದ ಹ್ಯಾರಿಸ್ ಯುಎಇಯಲ್ಲಿ ಸೇರಿಕೊಳ್ಳಲಿದ್ದಾರೆ. 2018-19 ಋತುಗಳಲ್ಲಿ ತಂಡದ ಬೌಲಿಂಗ್‌ನ ಕೋಚ್ ಆಗಿದ್ದ ಜೇಮ್ಸ್ ಹೋಪ್ಸ್ ಅವರೊಂದಿಗೆ ಪ್ರಯಾಣಿಸಲು ತಂಡಕ್ಕೆ ಸಾಧ್ಯವಾಗುವುದಿಲ್ಲ. ಅವರು ವೈಯಕ್ತಿಕ ಕಾರಣದಿಂದಾಗಿ ತಂಡದಿಂದ ದೂರ ಸರಿದಿದ್ದಾರೆಂದು ಪ್ರಕಟನೆ ತಿಳಿಸಿದೆ. ಐಪಿಎಲ್‌ಗೆ ಮರಳಲು ನಾನು ಖುಷಿಪಟ್ಟಿದ್ದೇನೆ ಎಂದು ಹ್ಯಾರಿಸ್ ತನ್ನ ಹೊಸ ಜವಾಬ್ದಾರಿಯ ಬಗ್ಗೆ ಹೇಳಿದ್ದಾರೆ.

ಐಪಿಎಲ್ ಟ್ರೋಫಿಯನ್ನು ಎತ್ತುವ ಮಹತ್ವಾಕಾಂಕ್ಷಿ ತಂಡಕ್ಕೆ ಕೊಡುಗೆ ನೀಡಲು ಇದು ನನಗೆ ಒಂದು ದೊಡ್ಡ ಅವಕಾಶವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪ್ರಭಾವಶಾಲಿ ಬೌಲಿಂಗ್ ತಂಡವನ್ನು ಹೊಂದಿದೆ. ಶೀಘ್ರದಲ್ಲೇ ನಾನು ಜವಾಬ್ದಾರಿಯನ್ನು ವಹಿಸಿಕೊಳ್ಳುವೆ’’ಎಂದು ಹ್ಯಾರಿಸ್ ಹೇಳಿದ್ದಾರೆ.

ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ತಡವಾಗಿ ಪ್ರವೇಶಿಸಿದ ಹ್ಯಾರಿಸ್ ಟೆಸ್ಟ್‌ನಲ್ಲಿ 113 ವಿಕೆಟ್, ಏಕದಿನ 44 ಮತ್ತು ನಾಲ್ಕು ಟ್ವೆಂಟಿ-20 ವಿಕೆಟ್‌ಗಳನ್ನು ಪಡೆದಿದ್ದರು.

2009ರಲ್ಲಿ ಐಪಿಎಲ್ ಚಾಂಪಿಯನ್ ಡೆಕ್ಕನ್ ಚಾರ್ಜರ್ಸ್ ತಂಡದ ಸದಸ್ಯರಾಗಿದ್ದರು. ಗಾಯದ ಕಾರಣ ದಿಂದಾಗಿ 2015ರಲ್ಲಿ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು.

ಬಳಿಕ ಹ್ಯಾರಿಸ್ ಆಸ್ಟ್ರೇಲಿಯ ತಂಡ, ಬಿಗ್ ಬ್ಯಾಷ್ ಲೀಗ್ ತಂಡದ ಬ್ರಿಸ್ಬೇನ್ ಹೀಟ್ ಜೊತೆ ಕೋಚಿಂಗ್ ತಂಡದಲ್ಲಿ ಗುರುತಿಸಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಾಬ್ ತಂಡದ ಪರ ಆಡಿದ್ದರು.

ಡೆಲ್ಲಿ ಕ್ಯಾಪಿಟಲ್ಸ್ ಕೋಚಿಂಗ್ ಬಳಗದಲ್ಲಿ ರಿಕಿ ಪಾಂಟಿಂಗ್, ಮುಹಮ್ಮದ್ ಕೈಫ್, ಸ್ಯಾಮ್ಯುಯೆಲ್ ಬದ್ರಿ ಮತ್ತು ವಿಜಯ್ ದಹಿಯಾ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News