ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಯಶಸ್ಸು ಒಲಿಂಪಿಕ್ಸ್‌ ತಯಾರಿಗೆ ನೆರವಾಗಲಿದೆ: ಸಿಂಧು

Update: 2020-08-26 06:46 GMT

ಹೈದರಾಬಾದ್, ಆ.26: ವಿಶ್ವ ಚಾಂಪಿಯನ್ ಆಗಿ ವರ್ಷ ಪೂರ್ಣಗೊಳಿಸಿರುವ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರು ಇನ್ನೊಂದು ಬಾರಿ ವಿಶ್ವ ಚಾಂಪಿಯನ್ ಆದರೆ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ತಯಾರಿಗೆ ನೆರವಾಗಲಿದೆ ಎಂದು ಹೇಳಿದ್ದಾರೆ.

ಕೋಚ್ ಎಂ. ಶ್ರೀಕಾಂತ್ ವರ್ಮಾ ಅವರ ನಿಯಮಿತ ಫಿಟ್‌ನೆಸ್ ತರಬೇತಿಗೆ ಸುಚಿತ್ರಾ ಬ್ಯಾಡ್ಮಿಂಟನ್ ಅಕಾಡಮಿಗೆ ಭೇಟಿ ನೀಡುವುದರ ಮೂಲಕ ಸಿಂಧು ಗಮನಸೆಳೆದಿದ್ದಾರೆ.

ಆಗಸ್ಟ್ 25, 2019ರಂದು ಸ್ವಿಟ್ಜರ್ಲೆಂಡ್‌ನ ಬಾಸೆಲ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಸಿಂಧು ಚಿನ್ನ ಜಯಿಸಿದ್ದ್ದರು.

‘‘ನನ್ನ ಯಶಸ್ಸು ನನಗೆ ತರಬೇತಿ ನೀಡಿದ ತಂಡದ ಪ್ರಯತ್ನದ ಫಲಿತಾಂಶ ಎಂದು ನಾನು ಭಾವಿಸುತ್ತೇನೆ. ಸುಚಿತ್ರಾದಲ್ಲಿ ರಾಜಸ್ - ಪ್ರವೀಣ್ (ಸಂಸ್ಥಾಪಕ) ಮತ್ತು ಪ್ರದೀಪ್ (ನಿರ್ದೇಶಕ) ಅವರ ಅದ್ಭುತ ಬೆಂಬಲಕ್ಕೆ ನಾನು ಅಭಾರಿಯಾಗಿರುವೆ ’’ ಎಂದು ಸಿಂಧು ನುಡಿದರು.

ಕಳೆದ ವರ್ಷ ವಿಶ್ವ ಚಾಂಪಿಯನ್ ಟೂರ್ನಿಯ ಮೊದಲು ಸಿಂಧು ಥಾಯ್ ಓಪನ್ ಪಂದ್ಯಾವಳಿಯಿಂದ ಹೊರಗುಳಿದಿದ್ದರು. ಇದು ಅವರಿಗೆ ಫಿಟ್‌ನೆಸ್ ಸೇರಿದಂತೆ ಆಟದ ಎಲ್ಲಾ ಅಂಶಗಳತ್ತ ಗಮನ ಹರಿಸಲು ಸಹಾಯ ಮಾಡಿತು ಎಂದು ಸುಚಿತ್ರಾ ಅಕಾಡಮಿಯ ನಿರ್ದೇಶಕ ಪ್ರದೀಪ್ ಹೇಳಿದ್ದಾರೆ.

ಸಿಂಧು ಆ ನಡೆಯ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬಂದವು. ಆದರೆ ಸಿಂಧು ತನ್ನ ಸಾಮರ್ಥ್ಯವನ್ನು ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಸಾಬೀತುಪಡಿಸಿದರು ಎಂದು ಪ್ರದೀಪ್ ಹೇಳುತ್ತಾರೆ.

‘‘ವಿಶ್ವ ಚಾಂಪಿಯನ್ ಸ್ಪರ್ಧೆಯಲ್ಲಿ ನನ್ನ ಎದುರಾಳಿಗಳು ಯಾರೆಂದು ಗೊತ್ತಾದಾಗ ನನಗೆ ಸಂತಸ ಆಗಿತ್ತು. ಕ್ವಾರ್ಟರ್ ಫೈನಲ್‌ನಲ್ಲಿ ನಾನು ತೈ ತ್ಸು-ಯಿಂಗ್‌ರನ್ನು ಎದುರಿಸುವೆನು ಎಂದು ನನಗೆ ಮೊದಲೇ ತಿಳಿದಿತ್ತು, ಏಕೆಂದರೆ ಆ ಹಂತವನ್ನು ದಾಟಲು ಅವಳಿಗೆ ಕಷ್ಟವಾಗುತ್ತದೆಂದು ನನಗೆ ಮನವರಿಕೆಯಾಗಿತ್ತು’’ ಎಂದರು.

ಎರಡನೇ ವರ್ಷ ವಿಶ್ವ ಚಾಂಪಿಯನ್ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುವೆ. ಇದು ಮುಂದಿನ ವರ್ಷ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲಲು ಸಹಾಯ ಮಾಡಲಿದೆ ಎಂಬ ವಿಶ್ವಾಸವನ್ನು ಸಿಂಧು ವ್ಯಕ್ತಪಡಿಸಿದರು.

‘‘ನಾನು ಕೋವಿಡ್ ಲಾಕ್‌ಡೌನ್ ವಿರಾಮವನ್ನು ಅತ್ಯಂತ ಸಕಾರಾತ್ಮಕ ರೀತಿಯಲ್ಲಿ ತೆಗೆದುಕೊಳ್ಳುತ್ತೇನೆ. ಏಕೆಂದರೆ ಅದು ಎಲ್ಲಾ ಆಟಗಾರರಿಗೂ ಒಂದೇ ಆಗಿರುತ್ತದೆ. ಅದೃಷ್ಟವಶಾತ್, ಸ್ಪರ್ಧೆ ಇದ್ದಾಗಲೆಲ್ಲಾ ಆಟಕ್ಕೆ ಮರಳಲು ನಾನು ಬಯಸಿದ ಫಿಟ್‌ನೆಸ್ ಮಟ್ಟವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ’’ಎಂದು ಸಿಂಧು ಹೇಳಿದರು.

‘‘ವಿಶ್ವ ಚಾಂಪಿಯನ್ ಆಗಿರುವುದರಲ್ಲಿ ದೊಡ್ಡ ಪ್ಲಸ್ ಪಾಯಿಂಟ್ ಎಂದರೆ ನನ್ನ ಆತ್ಮವಿಶ್ವಾಸದ ಮಟ್ಟವು ಹೆಚ್ಚಾಗಿರುವುದು’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News