ಜೊಕೊವಿಕ್ ಜಯಭೇರಿ, ಥೀಮ್‌ಗೆ ಸೋಲು

Update: 2020-08-26 06:48 GMT

ನ್ಯೂಯಾರ್ಕ್, ಆ.26: ಕುತ್ತಿಗೆ ನೋವಿನ ನಡುವೆಯೂ ಹೋರಾಟ ನಡೆಸಿದ ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಇಲ್ಲಿ ನಡೆಯುತ್ತಿರುವ ವೆಸ್ಟರ್ನ್-ಸದರ್ನ್ ಟೆನಿಸ್ ಓಪನ್ ಟೂರ್ನಿಯಲ್ಲಿ ಜಯಭೇರಿ ಬಾರಿಸಿದರು. ದ್ವಿತೀಯ ಶ್ರೇಯಾಂಕದ ಡೊಮಿನಿಕ್ ಥೀಮ್ ಸೋಲನುಭವಿಸಿದರು.

ಕುತ್ತಿಗೆ ನೋವಿನಿಂದಾಗಿ ರವಿವಾರ ಆಡಬೇಕಾಗಿದ್ದ ಡಬಲ್ಸ್ ಪಂದ್ಯದಿಂದ ಹಿಂದೆ ಸರಿದಿದ್ದ ಜೊಕೊವಿಕ್ ಸೋಮವಾರ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ರಿಕಾರ್ಡಸ್ ಬೆರಾಂಕಿಸ್ ವಿರುದ್ಧ 7-6(7/2), 6-4 ಸೆಟ್‌ಗಳ ಅಂತರದಿಂದ ಜಯ ಸಾಧಿಸಿ ಅಂತಿಮ-16ರ ಸುತ್ತಿಗೆ ತಲುಪಿದರು. ಜೊಕೊವಿಕ್ ಮುಂದಿನ ಸುತ್ತಿನಲ್ಲಿ ಅಮೆರಿಕದ ಟೆನ್ನಿಸ್ ಸ್ಯಾಂಡ್‌ಗ್ರೆನ್‌ರನ್ನು ಎದುರಿಸಲಿದ್ದಾರೆ. ಸ್ಯಾಂಡ್‌ಗ್ರೆನ್ ಅವರು ಕೆನಡಾದ 15ನೇ ಶ್ರೇಯಾಂಕದ ಫೆಲಿಕ್ಸ್ ಅಗೆರ್-ಅಲಿಯಾಸ್ಸಿಮ್ ವಿರುದ್ಧ 6-7(4/7), 6-2, 7-6(7/5) ಸೆಟ್‌ಗಳಿಂದ ಜಯ ಸಾಧಿಸಿದರು.

32ನೇ ರ್ಯಾಂಕಿನ ಸರ್ಬಿಯದ ಫಿಲಿಪ್ ಕ್ರಾಜಿನೊವಿಕ್ ಆಸ್ಟ್ರೀಯದ ಥೀಮ್‌ರನ್ನು 6-2, 6-1 ನೇರ ಸೆಟ್‌ಗಳ ಅಂತರದಿಂದ ಮಣಿಸಿ ಶಾಕ್ ನೀಡಿದರು.ಜನವರಿಯಲ್ಲಿ ಜೊಕೊವಿಕ್ ವಿರುದ್ಧ ನಡೆದಿದ್ದ ಆಸ್ಟ್ರೇಲಿಯ ಓಪನ್ ಫೈನಲ್ ಪಂದ್ಯವನ್ನು ಐದು ಸೆಟ್‌ಗಳಿಗೆ ವಿಸ್ತರಿಸಿ ದಿಟ್ಟ ಹೋರಾಟ ನೀಡಿ ರನ್ನರ್ಸ್‌ಅಪ್‌ಗೆ ತೃಪ್ತಿಪಟ್ಟುಕೊಂಡಿದ್ದ ಥೀಮ್ ಕೊರೋನ ವೈರಸ್‌ನಿಂದಾಗಿ ಐದು ತಿಂಗಳ ವಿರಾಮದ ಬಳಿಕ ಆಡಿದ ಪಂದ್ಯದಲ್ಲಿ ಮೊದಲಿನ ಲಯ ಕಂಡುಕೊಳ್ಳಲು ವಿಫಲರಾದರು.

ಕ್ರಾಜಿನೊವಿಕ್ ಮುಂದಿನ ಸುತ್ತಿನಲ್ಲಿ ಹಂಗೇರಿಯದ ಮಾರ್ಟನ್ ಫುಸೊವಿಕ್ಸ್‌ರನ್ನು ಎದುರಿಸಲಿದ್ದಾರೆ. ಫುಸೊವಿಕ್ಸ್ ಬಲ್ಗೇರಿಯದ ಗ್ರಿಗೊರ್ ಡಿಮಿಟ್ರೊವ್‌ರನ್ನು 7-5, 4-6, 6-2 ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ.

ವಿಶ್ವದ ಮಾಜಿ ನಂ.1 ಆಟಗಾರ ಆ್ಯಂಡಿ ಮರ್ರೆ ವಿಶ್ವದ ನಂ.7ನೇ ಆಟಗಾರ ಅಲೆಕ್ಸಾಂಡರ್ ಝ್ವೆರೆವ್‌ರನ್ನು 6-3, 3-6, 7-5 ಸೆಟ್‌ಗಳ ಅಂತರದಿಂದ ಮಣಿಸಿ ಅಚ್ಚರಿ ಮೂಡಿಸಿದರು. ಮೂರು ವರ್ಷಗಳ ಬಳಿಕ ಅಗ್ರ-10 ಆಟಗಾರನ ವಿರುದ್ಧ ಮೊದಲ ಬಾರಿ ಗೆಲುವು ಸಾಧಿಸಿದರು.

2008 ಹಾಗೂ 2011ರಲ್ಲಿ ಸಿನ್ಸಿನಾಟಿ ಮಾಸ್ಟರ್ಸ್ ಪ್ರಶಸ್ತಿಯನ್ನು ಜಯಿಸಿದ್ದ ಮರ್ರೆ ಸತತ ಗಾಯದ ಸಮಸ್ಯೆಯಿಂದಾಗಿ ಟೆನಿಸ್‌ನಿಂದ ದೂರ ಉಳಿದು ಪ್ರಸ್ತುತ 129ನೇ ರ್ಯಾಂಕಿಗೆ ಕುಸಿದಿದ್ದಾರೆ. ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ 23 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಸೆರೆನಾ ವಿಲಿಯಮ್ಸ್ ಡಚ್‌ನ ಕ್ವಾಲಿಫೈಯರ್ ಅರಾಂಕ್ಸ ರಸ್ ವಿರುದ್ಧ 7-6(8/6), 3-6, 7-6(7/0)ಸೆಟ್‌ಗಳ ಅಂತರದಿಂದ ಜಯ ಸಾಧಿಸಿದ್ದಾರೆ.

ಒಸ್ಟಾಪೆಂಕೊ ಯು.ಎಸ್. ಓಪನ್‌ನಿಂದ ದೂರ

ಫ್ರೆಂಚ್ ಓಪನ್ ಮಾಜಿ ಚಾಂಪಿಯನ್ ಜೆಲೆನಾ ಒಸ್ಟಾಪೆಂಕೊ ಸೋಮವಾರ ಯು.ಎಸ್. ಓಪನ್‌ನಿಂದ ದೂರ ಉಳಿಯುವ ನಿರ್ಧಾರ ಕೈಗೊಂಡಿದ್ದಾರೆ. ವೇಳಾಪಟ್ಟಿಯ ಬದಲಾವಣೆಯನ್ನು ಉಲ್ಲೇಖಿಸಿ ಅವರು ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

ಮುಂದಿನ ವಾರ ಪ್ರಾರಂಭವಾಗುವ ಪಂದ್ಯಾವಳಿಯಿಂದ ಡಬ್ಲುಟಿಎ ಶ್ರೇಯಾಂಕದಲ್ಲಿ ಅಗ್ರ ಎಂಟರಲ್ಲಿ ಸ್ಥಾನ ಪಡೆದಿರುವ ಆರು ಮಂದಿ ಈಗಾಗಲೇ ಹೊರಗುಳಿದಿದ್ದಾರೆ. ಇದರಲ್ಲಿ ನಂ .1 ಆ್ಯಸ್ ಬಾರ್ಟಿ ಮತ್ತು ನಂ. 6 ಬಿಯಾಂಕಾ ಆ್ಯಂಡ್ರೀಸ್ಕು ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News