ಸಿಮ್ರಾನ್‌ಗೆ ನೀಡಿದ ಭರವಸೆ ಈಡೇರಿಸದ ದಿಲ್ಲಿ

Update: 2020-09-04 05:10 GMT

ಹೊಸದಿಲ್ಲಿ, ಸೆ.3: ಯುವ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಕುಸ್ತಿಪಟು ಸಿಮ್ರಾನ್ ಅವರಿಗೆ ದಿಲ್ಲಿ ಸರಕಾರ ನೀಡಿದ್ದ ನಗದು ಪುರಸ್ಕಾರ ಭರವಸೆಯನ್ನು ಈಡೇರಿಸಿಲ್ಲ ಎಂದು ಸಿಮ್ರಾನ್ ಅವರ ತಂದೆ ರಾಜೇಶ್ ಹೇಳಿದ್ದಾರೆ.

ಯುವ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಕುಸ್ತಿಪಟು ಸಿಮ್ರಾನ್ ಅವರಿಗೆ 2018ರಲ್ಲಿ ದಿಲ್ಲಿ ಸರಕಾರದ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರು ನಗದು ಬಹುಮಾನದ ಭರವಸೆ ನೀಡಿದ್ದರು. ‘‘ಕಳೆದ ಜುಲೈನಲ್ಲಿ ಸಿಮ್ರಾನ್ ಸೋಷಿಯಲ್ ಮೀಡಿಯಾದಲ್ಲಿ ಈ ವಿಷಯವನ್ನು ತಿಳಿಸಿದಾಗ ಆಗಸ್ಟ್‌ನಲ್ಲಿ ಹಣ ಸಿಗುತ್ತದೆ ಎಂದು ಸರಕಾರಿ ಅಧಿಕಾರಿಗಳು ಉತ್ತರ ನೀಡಿದ್ದರು. ಆದರೆ ಇಲ್ಲಿಯವರೆಗೆ ಏನೂ ಮಾಡಿಲ್ಲ’’ಎಂದು ಸಿಮ್ರಾನ್ ತಂದೆ ರಾಜೇಶ್ ಹೇಳಿದ್ದಾರೆ.

ರಾಜೇಶ್ ಕೆಲವು ದಿನಗಳ ಹಿಂದೆ ಛತ್ರಾಸಲ್ ಕ್ರೀಡಾಂಗಣದಲ್ಲಿ ಅಧಿಕಾರಿಗಳನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಆಗಸ್ಟ್ 31ರ ಹೊತ್ತಿಗೆ ಸಿಮ್ರಾನ್‌ಗೆ ನೀಡಲಾದ ಭರವಸೆಯನ್ನು ಈಡೇರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು ಎಂದು ರಾಜೇಶ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಸತ್ಯೇಂದರ್ ಜೈನ್ (ದಿಲ್ಲಿ ಕ್ಯಾಬಿನೆಟ್‌ಸಚಿವರು) ಸರಕಾರದಿಂದ ನಗದು ಪ್ರಶಸ್ತಿ ನೀಡುವುದಾಗಿ ಭರವಸೆ ನೀಡಿ ಎರಡು ವರ್ಷಗಳು ಕಳೆದಿವೆ. ಯಾವುದೇ ಸಹಾಯ ಸಿಕ್ಕಿಲ್ಲ ಎಂದು ಹೇಳಿದ್ದ ಸಿಮ್ರಾನ್ ಅವರು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಗಮನ ಸೆಳೆಯಲು ಪ್ರಯತ್ನಿಸಿದ್ದರು. ಆದರೆ ನನ್ನ ಇಮೇಲ್‌ಗೆ ಇನ್ನೂ ಉತ್ತರ ಬಂದಿಲ್ಲ ಎಂದು ಅವರು ಹೇಳಿದ್ದಾರೆ.

‘‘ನನ್ನ ಕಳಪೆ ಆರ್ಥಿಕ ಪರಿಸ್ಥಿತಿಯಿಂದಾಗಿ ನನಗೆ ನಿಯಮಿತ ವಾಗಿ ಅಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ. ನನ್ನ ಅಭ್ಯಾಸವನ್ನು ಪುನರಾರಂಭಿಸಲು ಕ್ರೀಡಾ ಕೋಟಾ ಪ್ರಕಾರ ನನಗೆ ನಗದು ಬಹುಮಾನವನ್ನು ಬಿಡುಗಡೆ ಮಾಡುವಂತೆ ನಾನು ದಿಲ್ಲಿ ಸರಕಾರಕ್ಕೆ ಮತ್ತೊಮ್ಮೆ ಮನವಿ ಮಾಡುತ್ತೇನೆ’’ ಎಂದು ಸಿಮ್ರಾನ್ ಹೇಳಿದ್ದಾರೆ.

2018 ರಲ್ಲಿ ಬ್ಯುನಸ್ ಐರಿಸ್‌ನಲ್ಲಿ ನಡೆದ ಯೂತ್ ಒಲಿಂಪಿಕ್ಸ್ ನಲ್ಲಿ ಒಂಭತ್ತು ಬೆಳ್ಳಿ ಪದಕ ಗೆದ್ದ ಭಾರತದ ಯುವ ಕುಸ್ತಿಪಟುಗಳಲ್ಲಿ ಸಿಮ್ರಾನ್ ಒಬ್ಬರಾಗಿದ್ದರು. ಈ ತಂಡವು ಎರಡು ಚಿನ್ನ ಮತ್ತು ಒಂದು ಕಂಚು ಜಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News