ಭಾರತದ ಬಗ್ಗೆ ದ್ವೇಷದ ಭಾವನೆ ಹೊಂದಿದ್ದ ಅಮೆರಿಕದ ಮಾಜಿ ಅಧ್ಯಕ್ಷ ನಿಕ್ಸನ್
ವಾಶಿಂಗ್ಟನ್,ಸೆ.5: ಅಮೆರಿಕದ ಮಾಜಿ ಅಧ್ಯಕ್ಷ ರಿಚರ್ಡ್ ನಿಕ್ಸನ್ ಭಾರತದ ಬಗ್ಗೆ ಕೆಟ್ಟ ಅಭಿಪ್ರಾಯ ಹಾಗೂ ದ್ವೇಷದ ಭಾವನೆಯನ್ನು ಹೊಂದಿದ್ದರು ಎಂಬುದನ್ನು ಶ್ವೇತಭವನದ ಧ್ವನಿಮುದ್ರಿತ ದಾಖಲೆಳಿಂದ ಬೆಳಕಿಗೆ ಬಂದಿದೆ. ನಿಕ್ಸನ್ ಹಾಗೂ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಹೆನ್ರಿ ಕಿಸಿಂಜರ್ ಭಾರತದ ಬಗ್ಗೆ ಹೊಂದಿದ್ದ ಪೂರ್ವಾಗ್ರಹ ಪೀಡಿತ ಅಭಿಪ್ರಾಯಗಳು, ಭಾರತ ಹಾಗೂ ದಕ್ಷಿಣ ಏಶ್ಯದ ಕುರಿತ ಅಮೆರಿಕದ ನೀತಿಯ ಮೇಲೆ ಪ್ರಭಾವ ಬೀರಿದ್ದವು ಎಂದು ಎಂದು ಪ್ರಿನ್ಸ್‌ಟನ್ ವಿವಿಯ ಪ್ರೊಫೆಸರ್ ಗ್ಯಾರಿ ಬ್ಯಾಸ್ಸ್ ಅಭಿಪ್ರಾಯಿಸಿದ್ದಾರೆ.
‘‘ಅಮೆರಿಕವು ಪ್ರಸಕ್ತ ಜನಾಂಗೀಯವಾದ ಹಾಗೂ ಅಧಿಕಾರದ ಸಮಸ್ಯೆಯಿಂದ ಬಾಧಿತವಾಗಿದೆ. ಇಂತಹ ಸನ್ನಿವೇಶದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ನಿಕ್ಸನ್ ಹಾಗೂ ಅವರ ಸಲಹೆಗಾರ ಹೆನ್ರಿ ಕಿಸಿಂಜರ್ ಹೊಂದಿದ್ದ ಜನಾಂಗೀಯ ಬೇಧದ ನಿಲುವುಗಳ ಕುರಿತು ಈಗ ಬಹಿರಂಗಗೊಂಡಿರುವ ಶ್ವೇತಭವದ ದಾಖಲೆಗಳು ಕಳವಳಕಾರಿ ಸಾಕ್ಷ್ಯಗಳನ್ನು ಒದಗಿಸಿವೆ ಎಂದು ಗ್ಯಾರಿ ಬಾಸ್ಸ್, ನ್ಯೂಯಾರ್ಕ್ ಟೈಮ್ಸ್ ದಿನಪತ್ರಿಕೆಯಲ್ಲಿ ಬರೆದಿರುವ ‘ ದಿ ಟೆರಿಬಲ್ ಕೋಸ್ಟ್ ಆಫ್ ಪ್ರೆಸಿಡೆನ್ಶಿಯಲ್ ರೇಸಿಸಂ’ ಎಂಬ ಲೇಖನದಲ್ಲಿ ತಿಳಿಸಿದ್ದಾರೆ.
ರಿಪಬ್ಲಿಕನ್ ಪಕ್ಷದವರಾದ ರಿಚರ್ಡ್ ನಿಕ್ಸನ್ ಅಮೆರಿಕದ 37ನೇ ಅಧ್ಯಕ್ಷರಾಗಿ, 1969ರಿಂದ 1974ರವರೆಗೆ ಕಾರ್ಯನಿರ್ವಹಿಸಿದ್ದರು.
1971,ನವೆಂಬರ್ 4ರಂದು ನಿಕ್ಸನ್ ಅವರು ಶ್ವೇತಭವನದಲ್ಲಿ, ಪ್ರಧಾನಿ ಇಂದಿರಾಗಾಂಧಿ ಜೊತೆ ಶೃಂಗಸಭೆ ನಡೆಸಿದ ಸಂದರ್ಭ ಬಿಡುವಿನ ವೇಳೆ ಕಿಸಿಂಜರ್ ಜೊತೆ ಮಾತನಾಡುತ್ತಿದ್ದಾಗ ಭಾರತೀಯರ ಬಗ್ಗೆ ಕೆಟ್ಟ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು ಎಂದು ಬಾಸ್ಸ್ ಲೇಖನದಲ್ಲಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಭಾರತೀಯರು ಆಕರ್ಷಕರಲ್ಲವೆಂದೂ ಅವರು ದ್ವೇಷಪೂರಿತ ಧ್ವನಿಯಲ್ಲಿ ಟೀಕಿಸಿದ್ದರು. ಆದರೆ ಇದಕ್ಕೆ ಕಿಸಿಂಜರ್ ನೀಡಿದ ಪ್ರತಿಕ್ರಿಯೆಯು ಧ್ವನಿಮುದ್ರಿತ ಟೇಪ್‌ನಲ್ಲಿ ಸ್ಪಷ್ಟವಾಗಿ ಕೇಳಿಸುತ್ತಿರಲಿಲ್ಲವೆಂದು ಅವರು ಹೇಳಿ ದ್ದಾರೆ.
1971ರ ಜೂನ್ 3ರಂದು ಕಿಸಿಂಜರ್ ಅವರು ಪಾಕಿಸ್ತಾನ ಸೇನೆಯ ಹಿಡಿತದಲ್ಲಿದ್ದ ಬಾಂಗ್ಲಾದಿಂದ ಪಲಾಯನ ಮಾಡಿದ್ದ ಲಕ್ಷಾಂತರ ಮಂದಿಗೆ ಭಾರತ ಆಶ್ರಯ ನೀಡಿದಾಗಲೂ ಕಿಸಿಂಜರ್ ಭಾರತೀಯರ ಬಗ್ಗೆ ಕ್ರೋಧ ವ್ಯಕ್ತಪಡಿಸಿದ್ದರು. ನಿರಾಶ್ರಿತರ ಮಹಾಪಲಾಯನಕ್ಕೆ ಭಾರತವು ಕಾರಣವಾಗಿದೆಯೆಂದು ಅವರು ಖಂಡಿಸಿದ್ದರು ಮತ್ತು ಭಾರತೀಯರು ಒಟ್ಟಾರೆಯಾಗಿ ‘ಸಫಾಯಿ’ಜನರೆಂದು ನಿಂದಿಸಿದ್ದರೆಂದು ಗ್ಯಾರಿ ಬಾಸ್ ಲೇಖನದಲ್ಲಿ ನೆನಪಿಸಿದ್ದಾರೆ.